ಕೊಲಂಬಿಯದಲ್ಲಿ ಟೂರಿಸ್ಟ್ ಬೋಟ್ ಮುಳುಗಡೆ: ಆರು ಜನರು ಮೃತ್ಯು, 31 ಮಂದಿ ನಾಪತ್ತೆ

ಬೊಗೊಟಾ, ಜೂ.26: ವಾಯುವ್ಯ ಕೊಲಂಬಿಯಾದಲ್ಲಿ ರವಿವಾರ ಪ್ರವಾಸಿಗರಿದ್ದ ಬೋಟ್ ಮುಳುಗಡೆಯಾದ ಪರಿಣಾಮ ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದು, 31 ಜನರು ನಾಪತ್ತೆಯಾಗಿದ್ದಾರೆ ಎಂದು ಕೊಲಂಬಿಯಾದ ಅಧ್ಯಕ್ಷರು ತಿಳಿಸಿದ್ದಾರೆ.
ಪ್ರವಾಸಿಗರ ನಗರ ಗಿಟಾಪ್‌ನಲ್ಲಿರುವ ಎಲ್‌ಪೆನೊಲ್ ಸರೋವರದಲ್ಲಿ ನಾಲ್ಕು ಮಹಡಿಯ ಅಲ್ಮಿನೆಟ್ ಹೆಸರಿನ ಬೋಟು ಮುಳುಗಡೆಯಾಗಿದೆ. ಬೋಟು ಮುಳುಗಡೆಗೆ ಕಾರಣವೇನೆಂದು ಇನ್ನೂ ಗೊತ್ತಾಗಿಲ್ಲ.
ಘಟನೆಯಲ್ಲಿ ಈತನಕ ಆರು ಜನರು ಮೃತಪಟ್ಟಿದ್ದರೆ, 31 ಜನರು ನಾಪತ್ತೆಯಾಗಿದ್ದಾರೆ ಎಂದು ಕೊಲಂಬಿಯಾದ ಅಧ್ಯಕ್ಷರಾದ ಜುವಾನ್ ಮ್ಯಾನುಯೆಲ್ ಸ್ಯಾಂಟೋಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಸತ್ತವರ ಸಂಖ್ಯೆ ಆರಕ್ಕೇರಿದ್ದು, ಮೃತಪಟ್ಟವರೆಲ್ಲರೂ ಕೊಲಂಬಿಯಾದವರು. ಯಾರೂ ಅಪ್ರಾಪ್ತರಿಲ್ಲ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕದ ಅಧಿಕಾರಿ ಕಾರ್ಲೊಸ್ ಇವಾನ್ ತಿಳಿಸಿದ್ದಾರೆ.
ಬೋಟ್‌ನಲ್ಲಿ 170 ಜನರು ಪ್ರಯಾಣಿಸುತ್ತಿದ್ದರು. ಹೆಚ್ಚಿನವರನ್ನು ಇತರ ಬೋಟ್‌ಗಳು ರಕ್ಷಿಸಿವೆ. ಇನ್ನೂ ಕೆಲವರು ಸ್ವತಹ ಪಾರಾಗಿದ್ದಾರೆ. ಬೋಟ್ ಕ್ಷಣಮಾತ್ರದಲ್ಲಿ ಮುಳುಗಿದ್ದು, ಇದು ಕೆಲವೇ ನಿಮಿಷಗಳಲ್ಲಿ ನಡೆದುಹೋಗಿದೆ ಎಂದು ರಕ್ಷಣಾಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿರುವ ಅಗ್ನಿಶಾಮಕದ ದಳದ ನಾಯಕ ಹೇಳಿದ್ದಾರೆ.
ವಾಯುಪಡೆಯ ಒಂದು ಹೆಲಿಕಾಪ್ಟರ್ ಹಾಗೂ ಸೇನಾಪಡೆಯ ಎರಡು ಹೆಲಿಕಾಪ್ಟರ್‌ಗಳು ರಕ್ಷಣಾಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ.







