ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡಿ: ಅಮೆರಿಕದ ಸಿಇಒಗಳಿಗೆ ಪ್ರಧಾನಿ ಆಹ್ವಾನ

ವಾಷಿಂಗ್ಟನ್, ಜೂ.26: "ಪ್ರಸ್ತುತ ಭಾರತ ವ್ಯಾಪಾರ ಸ್ನೇಹಿ ಗಮ್ಯಸ್ಥಾನವಾಗಿ ಹೊರಹೊಮ್ಮುತ್ತಿದ್ದು, ಮುಂದಿನ ತಿಂಗಳು ಅತ್ಯಂತ ಮಹತ್ವದ ಸರಕು ಸೇವಾ ತೆರಿಗೆ(ಜಿಎಸ್‌ಟಿ) ಜಾರಿಗೆ ಬಂದ ಬಳಿಕ ಮತ್ತಷ್ಟು ಬದಲಾವಣೆಯಾಗಲಿದೆ. ತಾವುಗಳು ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡಬೇಕೆಂದು'' ಅಮೆರಿಕದ ಉನ್ನತ ಕಂಪೆನಿಗಳ ಸಿಇಒಗಳಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಆಹ್ವಾನ ನೀಡಿದ್ದಾರೆ.
ಸದ್ಯ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅಮೆರಿಕದ ಅಗ್ರ 20 ಕಂಪೆನಿಗಳ ಸಿಇಒಗಳೊಂದಿಗೆ ರವಿವಾರ ಮಹತ್ವದ ಸಭೆ ನಡೆಸಿದರು.
"ಕಳೆದ ಮೂರು ವರ್ಷಗಳಲ್ಲಿ ಎನ್‌ಡಿಎ ಸರಕಾರ ತಂದಿರುವ ಕೆಲವು ನೀತಿಗಳಿಂದಾಗಿ ಭಾರತ ದೊಡ್ಡ ಪ್ರಮಾಣದಲ್ಲಿ ವಿದೇಶಿ ನೇರ ಹೂಡಿಕೆ(ಎಫ್‌ಡಿಐ)ಯನ್ನು ಆಕರ್ಷಿಸುತ್ತಿದೆ'' ಎಂದು ಮೋದಿ ಹೇಳಿದ್ದಾರೆ.
ಸಿಇಒಗಳ ಸಭೆಯಲ್ಲಿ ಆ್ಯಪಲ್‌ನ ಟಿಮ ಕುಕ್, ಗೂಗಲ್‌ನ ಸುಂದರ್ ಪಿಚೈ, ಸಿಸ್ಕೊದ ಜಾನ್ ಚೇಂಬರ್ಸ್ ಹಾಗೂ ಅಮೆಝಾನ್‌ನ ಜೆಫ್ ಬೆರೆಸ್ ಅವರು ಉಪಸ್ಥಿತರಿದ್ದರು.
ಅಮೆರಿಕದ ಟಾಪ್ ಸಿಇಒಗಳೊಂದಿಗೆ ನಡೆಸಿರುವ ಸಂವಹನದಲ್ಲಿ ಭಾರತದಲ್ಲಿರುವ ಅವಕಾಶಗಳ ಬಗ್ಗೆ ವ್ಯಾಪಕ ಚರ್ಚೆ ನಡೆಸಿದ್ದೇವೆ ಎಂದು ಅಮೆರಿಕದ ಸಿಇಒಗಳೊಂದಿಗೆ 90 ನಿಮಿಷಗಳ ಸಭೆ ನಡೆಸಿದ ಬಳಿಕ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
"ಯುವ ಜನಸಂಖ್ಯೆ ಹಾಗೂ ಏರುತ್ತಿರುವ ಮಧ್ಯಮವರ್ಗಗಳ ಹಿನ್ನೆಲೆಯಲ್ಲಿ ಇಡೀ ವಿಶ್ವ ಭಾರತದ ಆರ್ಥಿಕತೆಯತ್ತ ಗಮನ ಹರಿಸುತ್ತಿದೆ. ಅದರಲ್ಲೂ ಮುಖ್ಯವಾಗಿ ಉತ್ಪಾದನೆ, ವ್ಯಾಪಾರ, ವಾಣಿಜ್ಯ, ಜನರಿಂದ ಜನರ ಸಂಪರ್ಕದಂತಹ ವಿಷಯಗಳತ್ತ ಗಮನ ಹರಿಸುತ್ತಿದ್ದಾರೆ'' ಎಂದು ಮೋದಿ ಹೇಳಿದ್ದಾರೆ.







