ಶಾಂತಿ-ಸಂತೋಷದ ಸಂದೇಶ ಸಾರುವ ಈದುಲ್ ಫಿತ್ರ್ ಗೆ ವಿಶೇಷ ಮಹತ್ವ: ಆದಿತ್ಯನಾಥ್

ಲಕ್ನೋ, ಜೂ.26: ಜಗತ್ತಿನಲ್ಲಿ ಶಾಂತಿ ಹಾಗೂ ಸಂತೋಷದ ಸಂದೇಶವನ್ನು ಸಾರುವ ಈದುಲ್ ಫಿತ್ರ್ ವಿಶೇಷ ಮಹತ್ವ ಪಡೆದಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ರಾಜ್ಯದ ಜನತೆಗೆ ಈದುಲ್ ಫಿತ್ರ್ ಶುಭಾಶಯ ಕೋರಿದ್ದಾರೆ.
"ಈ ಹಬ್ಬ ಸಹಬಾಳ್ವೆ, ಸಹೋದರತ್ವದ ಭಾವನೆಯನ್ನು ಮೂಡಿಸುವುದಲ್ಲದೆ ಸಾಮಾಜಿಕ ಏಕತೆಗೂ ಸಹಕಾರಿಯಾಗಿದೆ'' ಎಂದು ಆದಿತ್ಯನಾಥ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕೂಡ ಜನತೆಗೆ ಈದ್ ಶುಭಾಶಯ ಕೋರಿದ್ದಾರೆ. "ಈದ್ ಶುಭ ಸಂದರ್ಭದಲ್ಲಿ ಎಲ್ಲರಿಗೂ ನನ್ನ ಹಾರ್ದಿಕ ಶುಭಾಶಯಗಳು" ಎಂದು ಪ್ರಧಾನಿ ತಮ್ಮ ಮನ್ ಕಿ ಬಾತ್ ಬಾನುಲಿ ಕಾರ್ಯಕ್ರಮದಲ್ಲಿ ಹೇಳಿದರು.
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತಮ್ಮ ಸಂದೇಶದಲ್ಲಿ "ಈ ಹಬ್ಬವು ದೇಶದ ಏಕತೆಯನ್ನು ಮತ್ತಷ್ಟು ಬಲಗೊಳಿಸಲು ಸಹಕಾರಿಯಾಗುವುದು ಎಂದರು.
ಗೃಹ ಸಚಿವ ರಾಜನಾಥ್ ತಮ್ಮ ವೀಡಿಯೋ ಸಂದೇಶದಲ್ಲಿ ಪ್ರಮುಖವಾಗಿ ಕಾಶ್ಮೀರದ ಸಹೋದರ ಸಹೋದರಿಯರಿಗೆ ಶುಭಾಶಯ ಸಲ್ಲಿಸಿ ಈ ಹಬ್ಬ ರಾಜ್ಯದಲ್ಲಿ ಹೊಸ ಶಕೆಯ ಆರಂಭಕ್ಕೆ ಕಾರಣವಾಗಬಹುದೆಂಬ ಆಶಾವಾದ ವ್ಯಕ್ತಪಡಿಸಿದ್ದಾರೆ.





