ಮುಂಬೈ ಜೈಲಿನಲ್ಲಿ ಗಲಭೆ: ಇಂದ್ರಾಣಿ ಮುಖರ್ಜಿ ಹೇಳಿಕೆ ದಾಖಲಿಸಿಕೊಂಡ ಪೊಲೀಸರು

ಮುಂಬೈ, ಜೂ.26: ಜೈಲಿನೊಳಗೆ ಸಹ ಕೈದಿಯೊಬ್ಬರು ಸಾವನ್ನಪ್ಪಿದ್ದನ್ನು ಪ್ರತಿಭಟಿಸಿ 200 ಕೈದಿಗಳು ಬೈಕಲಾ ಜೈಲಿನಲ್ಲಿ ನಡೆಸಿದ ದಾಂಧಲೆಗೆ ಸಂಬಂಧಿಸಿ ಕೊಲೆ ಆರೋಪಿ ಇಂದ್ರಾಣಿ ಮುಖರ್ಜಿಯವರಿಂದ ನಾಗ್ಪಾಡ ಪೊಲೀಸರು ಹೇಳಿಕೆಯೊಂದನ್ನು ಪಡೆದುಕೊಂಡಿದ್ದಾರೆ.
ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ 45ರ ಪ್ರಾಯದ ಮಂಜುಳಾ ಎಂಬ ಕೈದಿ ಜೈಲು ಅಧಿಕಾರಿಗಳ ತೀವ್ರ ಹಲ್ಲೆಯಿಂದಾಗಿ ಶುಕ್ರವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಜೆಜೆ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿಯನ್ನು ಆಧರಿಸಿ ಪೊಲೀಸರು ಆರು ಮಂದಿ ಜೈಲು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮುಂಬೈ ಜೈಲಿನಲ್ಲಿ ಸಹ ಕೈದಿಯೊಬ್ಬರು ಮೃತಪಟ್ಟ ಬಳಿಕ ಜೈಲಿನಲ್ಲಿ ಗಲಭೆ, ದಾಳಿ ಹಾಗೂ ದುಷ್ಕತ್ಯವನ್ನು ನಡೆಸಿದ ಆರೋಪದಲ್ಲಿ ಇಂದ್ರಾಣಿ ಸಹಿತ ಇತರ 200 ಕೈದಿಗಳ ವಿರುದ್ಧ ದೂರು ದಾಖಲಿಸಲಾಗಿದೆ.
ಜೈಲಿನಲ್ಲಿ ದಾಂಧಲೆ ನಡೆಸಿದ್ದ ಕೈದಿಗಳ ವಿರುದ್ಧ ನಾವು ಪ್ರಕರಣವನ್ನು ದಾಖಲಿಸಿದ್ದು, ತನಿಖೆ ಮುಂದುವರಿದಿದೆ. ಇಂದ್ರಾಣಿ ಮುಖರ್ಜಿ ಸಹಿತ ಎಲ್ಲ ಕೈದಿಗಳ ಹೇಳಿಕೆಗಳನ್ನು ಧ್ವನಿಮುದ್ರಿಸಿಕೊಂಡಿದ್ದೇವೆ ಎಂದು ನಾಗ್ಪಾಡ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ಮಹಿಳಾ ಜೈಲಾಧಿಕಾರಿಗಳಿಂದ ಹಲ್ಲೆಗೆ ಒಳಗಾಗಿದ್ದ ಮಂಜುಳಾ ಎದೆ ನೋವಿದೆ ಎಂದು ಹೇಳಿದ ಕಾರಣ ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಕೆ ಅಲ್ಲಿ ಮೃತಪಟ್ಟಿದ್ದರು. ಪೋಸ್ಟ್ ಮಾರ್ಟಂನಲ್ಲಿ ಮಹಿಳೆಯ ಶ್ವಾಸಕಾಂಗಕ್ಕೆ ಹಾನಿಯಾಗಿದೆ. ದೇಹದಲ್ಲಿ 11 ರಿಂದ 13 ಕಡೆಗಳಲ್ಲಿ ಗಾಯವಾಗಿರುವುದು ಗೊತ್ತಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಸಹ ಕೈದಿ ಸತ್ತಿರುವ ಸುದ್ದಿ ತಿಳಿಯುತ್ತಲೇ ಬೈಕಲಾ ಜೈಲಿನಲ್ಲಿದ್ದ ಕೈದಿಗಳು ಜೈಲಿನ ವಸ್ತುಗಳನ್ನು ಹಾನಿಗೊಳಿಸಿದ್ದರು.ಕೆಲವರು ಜೈಲಿನ ಮೇಲ್ಛಾವಣಿಯ ಮೇಲೇರಿ ಅಧಿಕಾರಿಗಳ ಮೇಲೆ ಕೈಗೆ ಸಿಕ್ಕಿದ್ದನ್ನು ಎಸೆದಿದ್ದರು. ಓರ್ವ ಅಧಿಕಾರಿಗೆ ತಲೆಗೆ ಗಾಯವಾಗಿತ್ತು.







