ಅಶ್ರಫ್ ಕಲಾಯಿ ಮನೆಗೆ ಸಚಿವ ರೈ ಭೇಟಿ
ನಾಗರಿಕರಿಂದ ಪ್ರತಿಭಟನೆ
ಬಂಟ್ವಾಳ, ಜೂ. 26: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಎಸ್ಡಿಪಿಐ ನಾಯಕ ಅಶ್ರಫ್ ಅವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಕೊಲೆಗಡುಕರನ್ನು ಹಾಗೂ ಅವರಿಗೆ ಸಹಕಾರ ನೀಡಿದವರನ್ನು ಶೀಘ್ರ ಬಂಧಿಸಲಾಗುವುದು. ಘಟನೆಯ ಹಿಂದೆ ಯಾರೇ ಇದ್ದರೂ ಅವರ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವ ರೈ ಭರವಸೆ ನೀಡಿದರು.
ಈ ಸಂದರ್ಭ ಜಿಪಂ ಸದಸ್ಯ ಪ್ರಕಾಶ್ ಶೆಟ್ಟಿ, ಅಬ್ಬಾಸ್ ಅಲಿ, ಕಲಾಯಿ ವಲಯ ಕಾಂಗ್ರೆಸ್ ಪದಾಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಯುವಕರಿಂದ ಪ್ರತಿಭಟನೆ: ಅಶ್ರಫ್ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಭೇಟಿ ನೀಡಿದ ಸಂದರ್ಭದಲ್ಲಿ ಇಲ್ಲಿನ ಯುವಕರು ತಿರುಗಿ ನಿಲ್ಲುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಮುಹಮ್ಮದ್ ಅಶ್ರಫ್ ರ ಹಂತಕರು ಕಾಂಗ್ರೆಸ್ ಪಕ್ಷದ ಮುಖಂಡರ ಆಪ್ತರು ಹಾಗೂ ಆಪ್ತರ ಮಕ್ಕಳಾಗಿದ್ದಾರೆ. ದುಷ್ಕರ್ಮಿಗಳು ಸಂಘಪರಿವಾರ ಸಂಘಟನೆಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡು ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಸಾಧಿಸುತ್ತಿರುವುದು ಗೊತ್ತಿದ್ದರೂ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ನ ಹಲವು ಮುಖಂಡರು ಅಂತಹವರನ್ನು ತಮ್ಮ ಆಪ್ತರನ್ನಾಗಿಸಿಕೊಂಡಿದ್ದಾರೆ. ಅಲ್ಲದೆ ಉದ್ಯೋಗದಲ್ಲೂ ಪಾಲುದಾರಿಕೆ ನೀಡುತ್ತಿದ್ದಾರೆ ಎಂದು ನಾಗರಿಕರು ಆರೋಪಿಸಿದರು.