ಮಾವೋವಾದಿ ಸೋದರಮಾವನ ಹುಡುಕಾಟದಲ್ಲಿ ಪೊಲೀಸ್ ಅಳಿಯ
ಹುಟ್ಟುತ್ತಾ ಸಂಬಂಧಿ: ಬೆಳೆಯುತ್ತಾ ವಿರೋಧಿ!

ದೊರ್ನಪಾಲ್,ಜೂ.26 : ಛತ್ತೀಸಗಢದಲ್ಲಿ ಪೊಲೀಸ್ ಪಡೆಗೆ ಸವಾಲಾಗಿ ಹಲವಾರು ಘೋರ ದಾಳಿಗಳನ್ನು ನಡೆಸಿರುವ ಮಾವೋವಾದಿಗಳ ಕಮಾಂಡರ್ ಆಗಿರುವ 35 ವರ್ಷದ ಮಡ್ವಿ ಹಿದ್ಮಾ ತಲೆಗೆ ರೂ. 1 ಕೋಟಿಯ ಬಹುಮಾನವನ್ನು ಆಡಳಿತವು ಘೊಷಿಸಿ ಬಹಳಷ್ಟು ಸಮಯವಾಗಿದೆ. ಆತನ ಮಾವೋವಾದಿಗಳ ಪಡೆಗಳ ಭಯಾನಕ ದಾಳಿಗಳಿಗೆ ಈಗಾಗಲೇ 200ಕ್ಕೂ ಹೆಚ್ಚು ಜೀವಗಳು ಬಲಿಯಾಗಿವೆ.
ಇದೇ ಮಾವೋವಾದಿ ಕಮಾಂಡರ್ ನ ಸೋದರಳಿಯನೊಬ್ಬ ಛತ್ತೀಸಗಢ ಪೊಲೀಸನಾಗಿದ್ದಾನೆಂದರೆ ಆಶ್ಚರ್ಯವಾಗಿರದೇ ಇರದು. ಇದು ನಿಜ. ಹಿದ್ಮಾನ ಅಕ್ಕನ ಮಗನಾಗಿರುವ 34 ವರ್ಷದ ಮದ್ಕಂ ಭೀಮಾ ಛತ್ತೀಸಗಢದಲ್ಲಿ ಪೊಲೀಸ್ ಸೇವೆಯಲ್ಲಿದ್ದಾನೆ. ಅಂದ ಹಾಗೆ ಭೀಮಾ ಕೂಡ ಹಿದ್ಮಾ ನಂತೆಯೇ ಹಿಂದೆ ಮಾವೋವಾದಿಯಾಗಿದ್ದರೂ 2006ರಲ್ಲಿ ಶರಣಾಗಿದ್ದ. ಬಾಲ್ಯದಲ್ಲಿಯೇ ಅವರಿಬ್ಬರಿಗೆ ಗೆರಿಲ್ಲಾ ಯುದ್ಧ ತಂತ್ರಗಾರಿಕೆಯಲ್ಲಿ ತರಬೇತಿ ನೀಡಲಾಗಿತ್ತು.
ಅವರಿಬ್ಬರೂ ಪುರ್ವತಿ ಎಂಬ ಗ್ರಾಮದವರು. ಭೀಮಾ ಆ ಸಮಯ ಹಿದ್ಮಾ ಪಾಲಿಗೆ ಏಕೈಕ ಗೆಳೆಯನಾಗಿದ್ದರೆ ಈಗ ಆತನ ಅತ್ಯಂತ ದೊಡ್ಡ ವೈರಿಯಾಗಿ ಇಟ್ಟಿದ್ದಾನೆ. ಮಾವೋವಾದಿಗಳ ಮಕ್ಕಳ ಘಟಕ ಬಾಲಸಂಗಂ ಇದರ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಅವರಿಬ್ಬರು 14 ವರ್ಷದವರಿದ್ದಾಗ ಜವಾಬ್ದಾರಿ ಹೊಂದಿದ್ದರು. ಮುಂದೆ ಭೀಮಾ ಗೆರಿಲ್ಲಾ ಪೀಪಲ್ಸ್ ಕಮಿಟಿಯ ಕಾರ್ಯದರ್ಶಿಯಾಗಿದ್ದರೆ, ಹಿದ್ಮಾ ಮಿಲಿಟರಿ ಬೆಟಾಲಿಯನ್ ಸೇರಿದ್ದ. ಅವರಿಬ್ಬರೂ ಗಳಸ್ಯ ಕಂಠಸ್ಯರಾಗಿದ್ದರೆಂದು ಗ್ರಾಮಸ್ಥರು ಹೇಳುತ್ತಾರೆ. ಆದರೆ ಭೀಮಾ ತೀವ್ರಗಾಮಿಗಳ ಪಡೆಗೆ ಸೇರಿಸಿದ್ದ ಹಲವರು ಪೊಲೀಸ್ ಮಾಹಿತಿದಾರರೆಂಬ ಸಂಶಯದಿಂದ ಕೊಲೆಗೀಡಾದಾಗ ಹತಾಶೆಯಿಂದ ಭೀಮಾ ಪೊಲೀಸರಿಗೆ ಶರಣಾಗಿದ್ದ. 2011ರಲ್ಲಿ ಆತ ಪೊಲೀಸ್ ಪಡೆ ಸೇರಿದ್ದರೂ ತಲ್ಮೆಟ್ಲ ಗ್ರಾಮದಲ್ಲಿ ಮಾವೋವಾದಿ ನಿಗ್ರಹ ಕಾರ್ಯಾಚರಣೆಯಲ್ಲಿ ಕೆಲ ಸ್ಥಳೀಯ ನಿವಾಸಿಗಳ ಗುಡಿಸಲುಗಳಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಸೇವೆಯಿಂದ ವಜಾಗೊಳ್ಳುವ ಭೀತಿ ಎದುರಿಸುತ್ತಿದ್ದಾರಲ್ಲದೆ ಈ ವಿಚಾರದಲ್ಲಿ ಸಿಬಿಐ ತನಿಖೆಯನ್ನೂ ಎದುರಿಸಲಿದ್ದಾರೆ.
ತಾವು ಚಿಕ್ಕಂದಿನಲ್ಲಿ ಓಡಾಡಿದ ದಟ್ಟಾರಣ್ಯದ ಬಗ್ಗೆ ಹೆಚ್ಚು ಜ್ಞಾನವಿರುವ ಭೀಮಾ ಹಲವು ಬಾರಿ ಪೊಲೀಸರ ಪಾಲಿಗೆ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಮಹತ್ವದ ಸಹಾಯ ಮಾಡಿದ್ದಾರೆ. ಒಂದು ವೇಳೆ ತಮಗೆದುರಾಗಿ ಹಿದ್ಮಾ ಯಾವತ್ತಾದರೂ ಬಂದರೆ ಗುಂಡಿನ ದಾಳಿ ಖಂಡಿತ ಎಂದು ಹೇಳುವ ಭೀಮಾ ಈ ದಾಳಿಯಲ್ಲಿ ಇಬ್ಬರಲ್ಲಿ ಯಾರಿಗೆ ಅದೃಷ್ಟವಿದೆಯೋ ಅವರು ಬದುಕುಳಿಯುತ್ತಾರೆ ಎನ್ನುತ್ತಾರೆ.







