ಸಾಲ ಮನ್ನಾ ಫಲಾನುಭವಿಗಳಾದ 40 ಲಕ್ಷ ರೈತರ ಪಟ್ಟಿ ನೀಡಿ : ಮಹಾ ಸರಕಾರಕ್ಕೆ ಶಿವಸೇನೆ

ಮುಂಬೈ : ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ಸರಕಾರ ಇತ್ತೀಚೆಗೆ ಘೋಷಿಸಿದ್ದ 34,000 ಕೋಟಿ ರೂ. ಕೃಷಿ ಸಾಲ ಮನ್ನಾ ಯೋಜನೆಯನ್ನು ಆರಂಭದಲ್ಲಿ ಸ್ವಾಗತಿಸಿದ್ದ ಶಿವ ಸೇನೆ ಈಗ ಈ ಯೋಜನೆಯ ಫಲಾನುಭವಿಗಳಾದ 40 ಲಕ್ಷ ರೈತರ ಪಟ್ಟಿ ನೀಡುವಂತೆ ಸರಕಾರವನ್ನು ಆಗ್ರಹಿಸಿದೆ.
ಔರಂಗಾಬಾದ್ ನಗರದಲ್ಲಿ ಮಾತನಾಡಿದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ಸರಕಾರದ ಸಾಲ ಮನ್ನಾ ಘೋಷಣೆಗೆ ತಮ್ಮ ಆಗ್ರಹ ಕಾರಣ ಎಂದು ಹೇಳಿದರು. ಶಿವಸೇನೆ ಮತ್ತು ರೈತರು ಜತೆಯಾಗಿ ಈ ಬೇಡಿಕೆಯಿಟ್ಟಿದ್ದರಿಂದ ಸರಕಾರ ಅದಕ್ಕೆ ಸ್ಪಂದಿಸಲೇಬೇಕಾಯಿತು ಎಂದು ಠಾಕ್ರೆ ಹೇಳಿಕೊಂಡಿದ್ದಾರೆ.
ಸರಕಾರದ ಕೃಷಿ ಸಾಲ ಮನ್ನಾ ಯೋಜನೆಯ ಹೊರತಾಗಿಯೂ ನಾಸಿಕ್ ಮತ್ತು ಅಹ್ಮದ್ ನಗರದ ರೈತರ ಸಂಕಷ್ಟ ಮುಂದುವರಿಯಬಹುದು ಎಂದು ಹೇಳಿದ ಅವರು ಯೋಜನೆಯಿಂದ ರೈತರಿಗೆ ವಾಸ್ತವವಾಗಿ ಆಗುವ ಅನುಕೂಲಗಳನ್ನು ತಿಳಿಯಲು ಅಧ್ಯಯನಾ ತಂಡವೊಂದನ್ನು ಸರಕಾರ ರಚಿಸಬೇಕೆಂದರು.
ತಮ್ಮ ಸಾಲದ ಕಂತುಗಳನ್ನು ನಿಯಮಿತವಾಗಿ ಪಾವತಿಸುತ್ತಿರುವ ರೈತರಿಗೆ ನೀಡಲಾಗುವ ಬೋನಸ್ ಮೊತ್ತವನ್ನು ಏರಿಸಬೇಕು ಹಾಗೂ ಸಾಲ ಮನ್ನಾ ಯೋಜನೆ ಪ್ರಯೋಜನ ಪಡೆಯುಲು ಜೂನ್ 2016ಕ್ಕೆ ನಿಗದಿ ಪಡಿಸಲಾದ ಕಟ್-ಆಫ್ ದಿನಾಂಕವನ್ನು 2017ರ ತನಕ ವಿಸ್ತರಿಸಬೇಕೆಂದೂ ಉದ್ಧವ್ ಆಗ್ರಹಿಸಿದ್ದಾರೆ.
ಇತ್ತೀಚೆಗೆ ಸಾಲ ಮನ್ನಾ ಬೇಡಿಕೆ ಮುಂದಿರಿಸಿ ನಡೆಸಿದ ಪ್ರತಿಭಟನೆಯ ವೇಳೆ ರೈತರ ವಿರುದ್ಧ ದಾಖಲಿಸಲಾದ ಪ್ರಕರಣಗಳನ್ನೂ ಕೈಬಿಡುವಂತೆ ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.







