ಪೇಜಾವರ ಶ್ರೀಯವರ ಇಫ್ತಾರ್ ಕೂಟದಿಂದ ಹಿಂದೂ ಸಮಾಜಕ್ಕೆ ಅವಮಾನ: ಪ್ರಮೋದ್ ಮುತಾಲಿಕ್

ಉಡುಪಿ, ಜೂ.26: ಶ್ರೀಕೃಷ್ಣ ಮಠದಲ್ಲಿ ರಮಝಾನ್ ಪ್ರಯುಕ್ತ ಶನಿವಾರ ಇಫ್ತಾರ್ ಕೂಟ ಏರ್ಪಡಿಸಿದ್ದ ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥರ ವಿರುದ್ಧ ಶ್ರೀರಾಮಸೇನೆಯ ಸ್ಥಾಪಕ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದು, ಪೇಜಾವರ ಶ್ರೀಯವರ ಇಫ್ತಾರ್ ಕೂಟದಿಂದ ಹಿಂದೂ ಸಮಾಜಕ್ಕೆ ಅವಮಾನ ಮಾಡಿದಂತಾಗಿದೆ ಎಂದು ಆರೋಪಿಸಿದ್ದಾರೆ.
ಅವರು ಇಂದು ಉಡುಪಿಗೆ ಧಾವಿಸಿ ಪೇಜಾವರ ಶ್ರೀಗಳೊಂದಿಗೆ ಮಾತುಕತೆ ನಡೆಸಿ ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
"ಸುಮಾರು ಅರ್ಧಗಂಟೆ ಕಾಲ ಬಡಗುಮಳಿಗೆಯಲ್ಲಿ ನಡೆದ ಚರ್ಚೆಯ ವೇಳೆ ಪೇಜಾವರ ಶ್ರೀಗಳು ತನ್ನ ನಡೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದು, ಸ್ವಧರ್ಮ ನಿಷ್ಠೆ ಹಾಗೂ ಪರಧರ್ಮ ಸಹಿಷ್ಣುತೆ ನನ್ನ ಮುಖ್ಯ ಉದ್ದೇಶವಾಗಿದ್ದು, ಎಲ್ಲರೊಂದಿಗೆ ಸೌಹಾರ್ದತೆಯನ್ನು ಉಳಿಸಿಕೊಳ್ಳಲು ಇದು ಅಗತ್ಯವಾಗಿದೆ ಎಂದಿದ್ದಾರೆ. ಸಂಘ ಪರಿವಾರದ ವಿವಿಧ ಘಟಕಗಳು ಸ್ವಾಮೀಜಿಯ ಬೆಂಬಲಕ್ಕೆ ನಿಂತಿವೆ. ಮುಸ್ಲಿಮರನ್ನು ಶ್ರೀಕೃಷ್ಣ ಮಠಕ್ಕೆ ಆಹ್ವಾನಿಸಿ ಅವರಿಗೆ ಫಲಹಾರ ನೀಡಿರುವುದು ಹಿಂದೂ ಸಮಾಜಕ್ಕೆ ಮಾಡಿದ ಅವಮಾನವಾಗಿದೆ. ಗೋರಕ್ಷಕನಾದ ಶ್ರೀಕೃಷ್ಣನ ಗುಡಿಗೆ ಗೋಹಂತಕರನ್ನು ಕರೆದು ಸೌಹಾರ್ದತೆಯ ಮಾತುಕತೆ ನಡೆಸುವುದು ಸಮಾಜಕ್ಕೆ ಶೋಭೆ ತರುವುದಿಲ್ಲ" ಎಂದು ಮುತಾಲಿಕ್ ಹೇಳಿದರು.
"ನಮ್ಮ ಯಾವುದೇ ವಾದವನ್ನು ಒಪ್ಪದ ಸ್ವಾಮೀಜಿ ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದು, ಇದಕ್ಕೆ ನಮ್ಮ ಒಪ್ಪಿಗೆ ಇಲ್ಲ. ನಮ್ಮೆಲ್ಲಾ ನಾಯಕರು ಇಲ್ಲಿಗೆ ಬಂದಿದ್ದು, ಈ ಬಗ್ಗೆ ಕುಳಿತು ಚರ್ಚಿಸಿ ಮುಂದೇನು ಕ್ರಮ ತೆಗೆದುಕೊಳ್ಳಬೇಕೆಂಬುದನ್ನು ನಿರ್ಧರಿಸಲಿದ್ದೇವೆ. ಉಡುಪಿ ಶ್ರೀಕೃಷ್ಣನ ಪವಿತ್ರ ಕ್ಷೇತ್ರದಲ್ಲಿ ಮುಸ್ಲಿಮರ ರಮಝಾನ್ ಉಪವಾಸದ ಕೊನೆಯ ದಿನ ಮಠದ ಆವರಣದಲ್ಲಿ ಪೇಜಾವರ ಸ್ವಾಮೀಜಿಗಳು ಫಲ- ಉಪಹಾರ ನೀಡಿರುವುದು ಹಿಂದೂ ಸಮಾಜಕ್ಕೆ ಮಾಡಿದ ಅವಮಾನವಾಗಿದೆ. ಶ್ರೀಕೃಷ್ಣನನ್ನು ಗೋರಕ್ಷಕ, ಗೋಪಾಲ ಎನ್ನುತ್ತೇವೆ. ಅಲ್ಲಿಗೆ ಗೋಭಕ್ಷಕರನ್ನು ಕರೆದು ಅವರ ಜೊತೆಗೆ ಸೌಹಾರ್ದತಾ ಮಾತುಕತೆ ನಡೆಸುವುದು ಶೋಭೆ ತರುವುದಲ್ಲ. ಇದರಿಂದ ಇಡೀ ಹಿಂದೂ ಸಮಾಜಕ್ಕೆ ಅವಮಾನವಾಗಿದೆ" ಎಂದರು.
"ಈ ಕುರಿತು ಇಂದು ಸ್ವಾಮೀಜಿ ಅವರೊಂದಿಗೆ ಚರ್ಚಿಸಿದಾಗ ಅವರು ತಮ್ಮ ನಡೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಪೇಜಾವರ ಶ್ರೀಗಳು ಕೇವಲ ಉಡುಪಿಗೆ ಮಾತ್ರ ಸೇರಿದವರಲ್ಲ. ಅವರು ಇಡೀ ಹಿಂದು ಸಮಾಜಕ್ಕೆ ಮಾರ್ಗದರ್ಶಕರು. ವಿಎಚ್‌ಪಿಯ ಮಾರ್ಗದರ್ಶಕರು. ನಾವು ಗೋರಕ್ಷಣೆ, ಧರ್ಮದ ರಕ್ಷಣೆಗಾಗಿ ಬೀದಿಯಲ್ಲಿ ಜೀವದ ಹಂಗು ತೊರೆದು ಹೋರಾಟ ಮಾಡುತ್ತಿದ್ದೇವೆ. ಒಂದೊಂದು ಹಸುವನ್ನು ಉಳಿಸಲು ಹೋರಾಡುತ್ತಿದ್ದರೆ, ಸ್ವಾಮೀಜಿಯವರು ಗೋಹಂತಕರನ್ನು ಒಳಗೆ ಕರೆದು ಮಾನ್ಯತೆ ಕೊಡುವ ಪ್ರಕ್ರಿಯೆ ಒಪ್ಪುವಂತದ್ದಲ್ಲ. ಈ ಬಗ್ಗೆ ಇಡೀ ರಾಜ್ಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಪ್ರತಿಭಟನೆಗಳು ಆಗಬಾರದು ಎಂಬ ಉದ್ದೇಶದಿಂದ ನಾನು ನನ್ನೆಲ್ಲಾ ಪ್ರವಾಸಗಳನ್ನು ರದ್ದುಪಡಿಸಿ ಇಲ್ಲಿಗೆ ಬಂದು ಸ್ವಾಮೀಜಿಯವರೊಂದಿಗೆ ಮಾತನಾಡುವ ಪ್ರಯತ್ನ ನಡೆಸಿದ್ದೇವೆ. ಆದರೆ ಅವರು ಸಮರ್ಥನೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ನಮ್ಮ ಒಪ್ಪಿಗೆ ಇಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಏನು ಮಾಡಬೇಕು ಎಂಬ ಬಗ್ಗೆ ನಮ್ಮ ಪ್ರಮುಖರೆಲ್ಲ ಚರ್ಚಿಸಿ ಒಂದು ನಿರ್ಣಯವನ್ನು ತೆಗೆದುಕೊಳ್ಳುತ್ತೇವೆ" ಎಂದು ಮುತಾಲಿಕ್ ಹೇಳಿದ್ದಾರೆ.
"ಸೌಹಾರ್ದ, ಸಹಿಷ್ಣುತೆ ಹಿಂದೂ ಧರ್ಮದ್ದು, ನಾವಿದ್ದನ್ನು ಮಾಡಬೇಕಾಗುತ್ತದೆ ಎಂದು ಸ್ವಾಮೀಜಿ ಹೇಳುತ್ತಾರೆ. ಅವೆರಡನ್ನೂ ನೀವು ಈವರೆಗೆ ಮಾಡುತ್ತಾ ಬಂದಿದ್ದೀರಿ ಅದನ್ನು ಮುಂದುವರಿಸಿ. ಆದರೆ ಮಠದ ಆವರಣದೊಳಗೆ ಬೇಡ. ಇದರಿಂದ ಬೀದಿಗಿಳಿದು ಹೋರಾಡುವ ನಮ್ಮ ಪರಿಸ್ಥಿತಿ ಏನಾಗಬೇಕು. ಒಂದು ಹಸುವನ್ನು ಉಳಿಸುವ ಪ್ರಯತ್ನದಲ್ಲಿ ಕೇಸು ಹಾಕಿಸಿಕೊಂಡು ಜೀವದ ಹಂಗು ತೊರೆದು ಹೋರಾಡುವವರಿಗೆ ಇದರಿಂದ ಯಾವ ಸಂದೇಶ ಹೋಗುತ್ತದೆ. ಮಠದ ಆವರಣದೊಳಗೆ ಅವೆಲ್ಲ ಅಗತ್ಯವಿಲ್ಲ. ಹೊರಗೆ ಮಾಡಿದರೆ ನಮ್ಮ ಯಾವುದೇ ಅಭ್ಯಂತರವಿಲ್ಲ. ಮಠದೊಳಗೆ ಇವೆಲ್ಲ ಬೇಡ ಎಂಬುದು ನಮ್ಮ ನಿಲುವಾಗಿದೆ. ಅದನ್ನು ಸ್ಪಷ್ಟವಾಗಿ ಹೇಳಿದ್ದೇವೆ. ಆದರೆ ಅವರನ್ನು ಒಪ್ಪಿಲ್ಲ" ಎಂದರು.
"ನಾವು ನಮ್ಮ ಕರ್ತವ್ಯ ಮಾಡಿದ್ದೇವೆ ಎಂದು ಸ್ವಾಮೀಜಿ ಹೇಳುತ್ತಾರೆ. ಇದು ನಿಮ್ಮ ಕರ್ತವ್ಯವಲ್ಲ. ಇದರಿಂದ ತಪ್ಪು ಸಂದೇಶ ರವಾನೆಯಾಗುತ್ತದೆ. ಇದನ್ನು ಮುಂದಿನ ಪರ್ಯಾಯದವರೂ ಮುಂದುವರಿಸಿಕೊಂಡು ಹೋಗಬಹುದು. ಹಿರಿಯ ಶ್ರೀಗಳೇ ಮಾಡಿರುವುದರಿಂದ ನಾವು ಮುಂದುವರಿಸುತ್ತೇವೆ ಎಂಬ ಸಂದೇಶ ರವಾನೆಯಾಗುತ್ತದೆ. ಇಂದು ರಾಜಕೀಯದವರು, ಬಿಜೆಪಿ, ಜೆಡಿಎಸ್‌ನವರು ಇಫ್ತಾರ್ ಕೂಟ ಮಾಡುತ್ತಾರೆ. ಅದು ಮತಗೋಸ್ಕರ. ಆದರೆ ಇಲ್ಲಿ ಮತ ಅಲ್ಲ, ರಾಷ್ಟ್ರೀಯತೆ, ಧರ್ಮ, ಸಂಸ್ಕೃತಿಯ ಪ್ರಶ್ನೆ ಇದೆ. ಆ ನೋವಿನಿಂದ ನಾವು ಸ್ವಾಮೀಜಿಯವರ ಬಳಿ ನಮ್ಮ ನೋವನ್ನು ವ್ಯಕ್ತಪಡಿಸಿದ್ದೇವೆ. ಈ ನೋವು ಹಾಗೆ ಉಳಿದುಕೊಂಡಿದೆ" ಎಂದು ಮುತಾಲಿಕ್ ನುಡಿದರು.







