ಶಿವಮೊಗ್ಗದಲ್ಲಿ ಸಂಭ್ರಮ ಈದುಲ್ ಫಿತ್ರ್
.jpg)
ಶಿವಮೊಗ್ಗ, ಜೂ. 26: ಶಾಂತಿ, ಸಹಬಾಳ್ವೆ, ಸಹೋದರತೆಯ ಸಂಕೇತವಾದ ಈದುಲ್ ಫಿತ್ರ್ ಸೋಮವಾರ ಶಿವಮೊಗ್ಗ ನಗರದಲ್ಲಿ ಸಡಗರ, ಸಂಭ್ರಮದಿಂದ ಆಚರಿಸಿದರು.
=ಹಬ್ಬದ ಅಂಗವಾಗಿ ನಗರದ ಮಸೀದಿಗಳಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಉಳಿದಂತೆ ಸವಳಂಗ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸಾವಿರಾರು ಮಂದಿ ಜೊತೆಗೂಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ವೇಳೆ ವಿಶೇಷ ಧಾರ್ಮಿಕ ಪ್ರವಚನವನ್ನು ಧರ್ಮಗುರುಗಳು ನೀಡಿದರು. ಇದಾದ ನಂತರ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು ಪರಸ್ಪರ ಆಲಿಂಗಿಸಿಕೊಳ್ಳುವುದರ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಈ ಪ್ರಾರ್ಥನೆಯಲ್ಲಿ ವಿವಿಧ ಪಕ್ಷಗಳ, ಸಂಘಸಂಸ್ಥೆಗಳ ಮುಖಂಡರು ಕೂಡ ಭಾಗವಹಿಸಿ ಹಬ್ಬದ ಶುಭಾಶಯ ಕೋರಿದರು. ಸರ್ವಧರ್ಮ ಸಮನ್ವಯತೆ ಮೆರೆದರು. ಉಳಿದಂತೆ ನಗರದ ನ್ಯೂ ಮಂಡ್ಲಿ, ದ್ರೌಪದಮ್ಮ ಸರ್ಕಲ್, ಗೋಪಾಳದ ಅನುಪಿನಕಟ್ಟೆ ರಸ್ತೆ, ಮೇಲಿನ ತುಂಗಾನಗರ, ಸೂಳೆಬೈಲು, ರಾಗಿಗುಡ್ಡ, ಸೋಮಿನಕೊಪ್ಪದ ಈದ್ಗಾ ಮೈದಾನದಲ್ಲಿಯೂ ಸಾಮೂಹಿಕ ಪ್ರಾರ್ಥನೆ ನಡೆಸಿದರು. ಮೋಡ ಕವಿದ ವಾತಾವರಣ, ಆಗಾಗ್ಗೆ ಬೀಳುತ್ತಿದ್ದ ತುಂತುರು ಮಳೆಯು ಹಬ್ಬದ ಉತ್ಸಾಹಕ್ಕೆ ಅಡ್ಡಿಯುಂಟು ಮಾಡಲಿಲ್ಲ.
ಆಕರ್ಷಣೆ: ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದ ಪುಟಾಣಿಗಳು ಎಲ್ಲರ ಆಕರ್ಷಣೆಯ ಕೇಂದ್ರ ಬಿಂಧುವಾಗಿದ್ದರು. ಹೊಸ ಬಟ್ಟೆ ತೊಟ್ಟು ಕಂಗೊಳಿಸಿದರು.
ಭದ್ರತೆ: ಈದ್ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳು ಬಂದೋಬಸ್ತ್ ಕಾರ್ಯದ ಮೇಲುಸ್ತುವಾರಿ ವಹಿಸಿದ್ದರು. ಸಾಮೂಹಿಕ ಪ್ರಾರ್ಥನೆ ನಡೆದ ಈದ್ಗಾ ಮೈದಾನಗಳಲ್ಲಿ ಬಿಗಿ ಪೊಲೀಸ್ ಪಹರೆಯ ವ್ಯವಸ್ಥೆ ಮಾಡಲಾಗಿತ್ತು. ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಗಸ್ತು ವ್ಯವಸ್ಥೆ ಹೆಚ್ಚಿಸಲಾಗಿತ್ತು.







