"ಮಿಸ್ಟರ್ ಶೋ ಆಫ್" ಹೇಳಿಕೆ: ರಶ್ಮಿಕಾಗೆ ನಟ ಯಶ್ ಪ್ರತಿಕ್ರಿಯೆ ಏನು ಗೊತ್ತೇ..?

ಬೆಂಗಳೂರು, ಜೂ.26: 'ಕಿರಿಕ್ ಪಾರ್ಟಿ' ರಶ್ಮಿಕಾ ಮಂದಣ್ಣ ಇದೀಗ ಕನ್ನಡ ಚಿತ್ರರಂಗದಲ್ಲಿ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಕನ್ನಡ ಚಾನೆಲೊಂದರ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ "ನಿಮ್ಮ ಪ್ರಕಾರ ನಟರ ಪೈಕಿ ಮಿಸ್ಟರ್ ಶೋ ಆಫ್" ಯಾರು ಎಂಬ ನಿರೂಪಕರ ಪ್ರಶ್ನೆಗೆ ಉತ್ತರಿಸಿದ್ದ ರಶ್ಮಿಕಾ ಮಂದಣ್ಣ, ರಾಕಿಂಗ್ ಸ್ಟಾರ್ ಯಶ್ ಅವರ ಹೆಸರನ್ನು ಹೇಳಿದ್ದರು. ಈ ವಿಚಾರ ಭಾರೀ ವಿವಾದವನ್ನು ಸೃಷ್ಟಿಸಿತ್ತು. ರಶ್ಮಿಕಾ ವಿರುದ್ಧ ಯಶ್ ಅಭಿಮಾನಿಗಳು ಹರಿಹಾಯ್ದಿದ್ದರು.
ಈ ಬಗ್ಗೆ ನಟ ಯಶ್ ಅವರು ಫೇಸ್ಬುಕ್ ನಲ್ಲಿ ಪ್ರತಿಕ್ರಿಯಿಸಿದ್ದು, 'ಒಬ್ಬರ ಅಭಿಪ್ರಾಯ ಇನ್ನೊಬ್ಬರ ವ್ಯಕ್ತಿತ್ವವನ್ನು ನಿರ್ಧರಿಸುವುದಿಲ್ಲ'. ಈ ವಿಷಯ ಇಲ್ಲಿಗೆ ಬಿಟ್ಟುಬಿಡಿ ಎಂದಿದ್ದಾರೆ.
ರಶ್ಮಿಕಾ ಹೇಳಿಕೆಗೆ ಯಶ್ ಪ್ರತಿಕ್ರಿಯೆ: "ಎಲ್ಲರಿಗೂ ನಮಸ್ಕಾರ..ಒಬ್ಬ ನಟನಾಗಿ ನಿಮ್ಮೆಲ್ಲರ ಪ್ರೀತಿ ಮತ್ತು ಅಭಿಮಾನವನ್ನು ಸಂಪಾದಿಸುವುದನ್ನೇ ಗುರಿಯಾಗಿಟ್ಟುಕೊಂಡು ಕೆಲಸ ಮಾಡುವ ನಾನು, ಕೆಲವೊಮ್ಮೆ ಎದುರಾಗುವ ಅನಗತ್ಯ ಎನಿಸುವ ವಿಷಯಗಳನ್ನು ನಿರ್ಲಕ್ಷಿಸುವ ಸ್ವಭಾವವನ್ನು ರೂಢಿಸಿಕೊಂಡಿದ್ದೇನೆ. ಆದರೆ ನನ್ನನ್ನು ಪ್ರೀತಿಸುವ ನಿಮ್ಮ ಮನಸ್ಸಿಗೆ ನೋವಾದಾಗ ಪ್ರತಿಕ್ರಿಯೆ ನೀಡದೆ ಇರುವುದು ನನ್ನಿಂದ ಸಾಧ್ಯವಿಲ್ಲ. ನಿಮ್ಮ ಅಭಿಮಾನ ಪ್ರೀತಿಗೆ ಬೆಲೆಕಟ್ಟಲಾಗುವುದಿಲ್ಲ, ಅದಕ್ಕೆ ನಾನೆಂದು ಚಿರಋಣಿ. ರಶ್ಮಿಕಾ ಅವರು ವೈಯಕ್ತಿಕವಾಗಿ ನನಗೆ ಪರಿಚಿತರಲ್ಲ, ಇದುವರೆಗೂ ಭೇಟಿಯೂ ಮಾಡಿಲ್ಲ...ಮಾತು ಸಹ ಆಡಿಲ್ಲ. ಹಾಗೆಂದು ಅವರಿಗೆ ನನ್ನ ಬಗ್ಗೆ ಯಾವುದೇ ರೀತಿಯ ಅಭಿಪ್ರಾಯ ಇರಬಾರದೆಂದೇನಿಲ್ಲ. ಅವರ ಅಭಿಪ್ರಾಯ ಅವರದು, ಅದನ್ನು ಹೀಗಳೆಯುವ ಕೆಲಸ ಯಾರೂ ಮಾಡಬಾರದು. ಎಲ್ಲರ ಅಭಿಪ್ರಾಯವನ್ನು ಗೌರವಿಸೋಣ".
"ಒಬ್ಬರ ಅಭಿಪ್ರಾಯ ಇನ್ನೊಬ್ಬರ ವ್ಯಕ್ತಿತ್ವವನ್ನು ನಿರ್ಧರಿಸುವುದಿಲ್ಲ. ಈ ವಿಷಯ ಇಲ್ಲಿಗೆ ಬಿಟ್ಟುಬಿಡಿ, ಇಲ್ಲಿ ಚರ್ಚಿಸುವಂತದ್ದು ಏನೂ ಇಲ್ಲ! ಕೆಲವೇ ದಿನಗಳಲ್ಲಿ ''ಕೆ.ಜಿ.ಎಫ್'' ಚಿತ್ರದ ಮತ್ತೊಂದು ಸ್ಟಿಲ್ ಬರಲಿದೆ. ಅಲ್ಲಿಯವರೆಗೆ ಈದ್ ಮುಬಾರಕ್."







