ಕಳವು ಪ್ರಕರಣ: ಆರೋಪಿಗಳ ಸೆರೆ; ಚಿನ್ನಾಭರಣ ವಶ
ಶಿವಮೊಗ್ಗ, ಜೂ. 26: ಭದ್ರಾವತಿ ನಗರದ ವಿವಿಧೆಡೆ ಮನೆಗಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪದ ಮೇರೆಗೆ ಸ್ಥಳೀಯ ಪೊಲೀಸರು ಈರ್ವರನ್ನು ಬಂಧಿಸಿ ಲಕ್ಷಾಂತರ ರೂ. ಮೌಲ್ಯದ ನಗನಾಣ್ಯ ವಶಕ್ಕೆ ಪಡೆದಿರುವ ಘಟನೆ ವರದಿಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದ ನಿವಾಸಿಗಳಾದ ಅಪ್ರೋಝ್ ಯಾನೆ ಬೆಕ್ಕು ಮತ್ತು ರಕೀಬ್ ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ವಿಚಾರಣೆಯ ವೇಳೆ ಆರೋಪಿಗಳು 5 ಮನೆಗಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿದ್ದ ವಿವರವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಆರೋಪಿಗಳಿಂದ 3.5 ಲಕ್ಷ ರೂ. ಮೌಲ್ಯದ 114 ಗ್ರಾಂ ತೂಕದ ಚಿನ್ನ ಹಾಗೂ ಬೆಳ್ಳಿಯ ಆಭರಣ ಮತ್ತು ಸ್ಪ್ಲೆಂಡರ್ ಬೈಕ್‌ವೊಂದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸರಣಿ ಕಳ್ಳತನ: ಜೂ. 14 ರಿಂದ 16 ರವರೆಗೆ ನ್ಯೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರಣಿ ಮನೆಗಳ್ಳತನ ಪ್ರಕರಣಗಳು ವರದಿಯಾಗಿದ್ದವು. ಇದು ಸ್ಥಳೀಯರಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು. ಈ ಮನೆಗಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆಯವರು ಭದ್ರಾವತಿ ಪೊಲೀಸ್ ಉಪಾಧೀಕ್ಷಕರಾದ ಟಿ.ಜೆ.ಉದೇಶ್ ನೇತೃತ್ವದಲ್ಲಿ ವಿಶೇಷ ಪೊಲೀಸ್ ತಂಡ ರಚನೆ ಮಾಡಿದ್ದರು.





