ವಿಧಾನಸೌಧದಲ್ಲಿ ರಾಷ್ಟ್ರಪತಿ ಆಯ್ಕೆಗೆ ಮತದಾನ
ಬೆಂಗಳೂರು, ಜೂ. 26: ರಾಷ್ಟ್ರಪತಿ ಆಯ್ಕೆ ಸಂಬಂಧ ಜುಲೈ 17ರಂದು ನಡೆಯಲಿರುವ ಚುನಾವಣೆ ಹಿನ್ನೆನೆಲೆಯಲ್ಲಿ ವಿಧಾನಸೌಧದ ಮೊದಲನೆ ಮಹಡಿಯಲ್ಲಿನ ಕೊಠಡಿ ಸಂಖ್ಯೆ 106ನ್ನು ಮತದಾನ ನಡೆಯುವ ಸ್ಥಳವೆಂದು ನಿಗದಿಪಡಿಸಲಾಗಿದೆ.
ವಿಧಾನಸಭೆಯ ಚುನಾಯಿತ ಸದಸ್ಯರು, ಚುನಾವಣಾ ಆಯೋಗದಿಂದ ಅನುಮತಿ ಪಡೆದಿರುವ ಲೋಕಸಭೆ ಸದಸ್ಯರು ಈ ಕೊಠಡಿಯಲ್ಲಿ ರಾಷ್ಟ್ರಪತಿ ಅಭ್ಯರ್ಥಿಗಳಿಗೆ ಮತದಾನ ಮಾಡಬಹುದು. ಮತದಾನದ ವೇಳೆ ಚುನಾವಣಾ ಅಧಿಕಾರಿಗಳಿಗೆ ಗುರುತಿನ ಚೀಟಿಯನ್ನು ಶಾಸಕರು-ಸಂಸದರು ಹಾಜರುಪಡಿಸಬೇಕು. ಚುನಾವಣಾ ಅಧಿಕಾರಿಗಳಿಂದ ಮತ್ತೊಂದು ಗುರುತಿನ ಚೀಟಿ ಪಡೆದು ಮತಪತ್ರದಲ್ಲಿ ಆದ್ಯತೆಯ ಮತದಾನ ಮಾಡಬೇಕು.
ಮತದಾನದ ವೇಳೆಯಲ್ಲಿ ಚುನಾವಣಾ ಅಧಿಕಾರಿಗಳು ಒದಗಿಸುವ ಪೆನ್ನುಗಳನ್ನೆ ಬಳಸಿ ಭಾರತೀಯ ಸಂಖ್ಯಾ ವಾಚಕಗಳ ಅಂತಾರಾಷ್ಟ್ರೀಯ ರೂಪದಲ್ಲಿ, ರೋಮನ್ ಅಂಕಿಗಳಲ್ಲಿ, ಇಲ್ಲವೆ ಇನ್ಯಾವುದೇ ಭಾರತೀಯ ಭಾಷೆಗಳಲ್ಲಿ ಬಳಸುವ ಅಂಕಿಗಳನ್ನು ಬಳಸಬೇಕು. ಅಕ್ಷರಗಳನ್ನು ನಮೂದಿಸಬಾರದು ಹಾಗೂ ಬೇರೆ ಪೆನ್ನುಗಳನ್ನು ಬಳಸಬಾರದು ಎಂದು ಆಯೋಗ ಸೂಚಿಸಿದೆ.
Next Story