ರಾಷ್ಟ್ರಪತಿ ಚುನಾವಣೆ:ವಿಪಕ್ಷಗಳ ಅಭ್ಯರ್ಥಿಗೆ ಜೆಡಿಎಸ್ ಬೆಂಬಲ

ಬೆಂಗಳೂರು, ಜೂ. 26: ರಾಷ್ಟ್ರಪತಿ ಚುನಾವಣೆಯಲ್ಲಿ ಇಡಿ ದೇಶದಲ್ಲೆ ಬಿಜೆಪಿ ವಿರೋಧಿ ಶಕ್ತಿಗಳು ಒಗ್ಗೂಡಿರುವ ಬೆನ್ನಲ್ಲೆ ರಾಜ್ಯದಲ್ಲೂ ಜಾತ್ಯತೀಯ ಜನತಾ ದಳ (ಜೆಡಿಎಸ್) ಯುಪಿಎ ಅಭ್ಯರ್ಥಿ ಮೀರಾಕುಮಾರ್ ಅವರಿಗೆ ಬೆಂಬಲ ಘೋಷಣೆ ಮಾಡಿದ್ದಾರೆ.
ರಾಷ್ಟ್ರಪತಿ ಚುನಾವಣೆಯಲ್ಲಿ ಯುಪಿಎ ಅಭ್ಯರ್ಥಿಯಾಗಿರುವ ಮೀರಾ ಕುಮಾರ್ ಅವರ ನಾಮಪತ್ರಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸೂಚಕರಾಗಿ ಸಹಿ ಹಾಕುವ ಮೂಲಕ ಕಾಂಗ್ರೆಸ್ ನೇತೃತ್ವದ ಯುಪಿಎ ಅಭ್ಯರ್ಥಿಗೆ, ಜೆಡಿಎಸ್ ಬೆಂಬಲ ಸೂಚಿಸಿದರು.
ವಿಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಮೀರಾ ಕುಮಾರ್ ಆಯ್ಕೆಯಾಗಿದ್ದು, ನಾಮಪತ್ರ ಸಲ್ಲಿಸುವ ಪ್ರಕ್ರಿಯೆಗೆ ಕಾಂಗ್ರೆಸ್ ಚಾಲನೆ ನೀಡಿದೆ. ಯುಪಿಎ ಅಭ್ಯರ್ಥಿಗೆ ಬೆಂಬಲ ನೀಡುವ ಪಕ್ಷಗಳ ಮುಖಂಡರಿಂದ ನಾಮಪತ್ರಕ್ಕೆ ಸೂಚಕರಾಗಿ ಸಹಿ ಹಾಕಿಸಲಾಗುತ್ತಿದ್ದು, ಅದರಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರಿಂದ ಕಾಂಗ್ರೆಸ್ ಪಕ್ಷ ನಾಮಪತ್ರಕ್ಕೆ ಸಹಿ ಹಾಕಿಸಿದೆ.
ಈ ವೇಳೆ ಮಾತನಾಡಿದ ಕುಮಾರಸ್ವಾಮಿ, ರಾಷ್ಟ್ರಪತಿ ಚುನಾವಣೆಯಲ್ಲಿ ಜೆಡಿಎಸ್, ಯುಪಿಎ ಅಭ್ಯರ್ಥಿ ಮೀರಾಕುಮಾರ್ ಅವರನ್ನು ಬೆಂಬಲಿಸಿ ಅವರ ಪರ ಮತ ಹಾಕಲಿದೆ. ಈಗಾಗಲೇ ಸೂಚಕರಾಗಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಸಂಸದ ಪುಟ್ಟರಾಜು, ತಾನು ಹಾಗೂ ಶಾಸಕ ಮಧುಬಂಗಾರಪ್ಪ, ಗೋಪಾಲಯ್ಯ ಸಹಿ ಹಾಕಿದ್ದಾರೆ ಎಂದರು.







