ನನ್ನದು ಕಳಂಕರಹಿತ ಸರಕಾರ: ಮೋದಿ

ವಾಶಿಂಗ್ಟನ್, ಜೂ.26: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರವನ್ನು ಮೂಲೋತ್ಪಾಟನೆ ಮಾಡುವ ನಿಟ್ಟಿನಲ್ಲಿ ತಾನು ಮಹತ್ತರವಾದ ಯಶಸ್ಸು ಸಾಧಿಸಿರುವುದಾಗಿ ಹೇಳಿಕೊಂಡಿದ್ದಾರೆ ಹಾಗೂ ಕಳೆದ ಮೂರು ವರ್ಷಗಳಲ್ಲಿ ತನ್ನ ಸರಕಾರದ ಮೇಲೆ ಒಂದೇ ಒಂದು ಕಳಂಕದ ಕಪ್ಪು ಚುಕ್ಕೆಯಿಲ್ಲವೆಂದವರು ಹೇಳಿದ್ದಾರೆ.
ಈ ಹಿಂದಿನ ಸರಕಾರಗಳು ಚುನಾವಣೆಗಳಲ್ಲಿ ಪರಾಭವಗೊಳ್ಳಲು ಅವುಗಳ ಮೇಲಿದ್ದ ಭ್ರಷ್ಟಾಚಾರದ ಆರೋಪವೇ ಮುಖ್ಯ ಕಾರಣವಾಗಿತ್ತೆಂದವರು ಹೇಳಿದ್ದಾರೆ.
ವರ್ಜಿನಿಯಾದಲ್ಲಿ ತನ್ನ ಗೌರವಾರ್ಥವಾಗಿ ಏರ್ಪಡಿಸಲಾದ ಸತ್ಕಾರಕೂಟದಲ್ಲಿ 600 ಮಂದಿ ಭಾರತೀಯ ಅಮೆರಿಕನ್ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಅವರು ಭಾರತೀಯರು ಭ್ರಷ್ಟಾಚಾರವನ್ನು ದ್ವೇಷಿಸುತ್ತಿರುವುದಾಗಿ ಹೇಳಿದ್ದಾರೆ.
ಭಾರತವನ್ನು ಉನ್ನತಿಯೆಡೆಗೆ ಕೊಂಡೊಯ್ಯಲು ತನ್ನ ಸರಕಾರ ಶ್ರಮಿಸಲಿರುವುದಾಗಿ ಪ್ರಧಾನಿ ತಿಳಿಸಿದರು.
‘‘ಬಾಹ್ಯಾಕಾಶವಿರಲಿ ಅಥವಾ ಕೃಷಿ ಕ್ಷೇತ್ರವಿರಲಿ ಭಾರತವು ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದಾಗಿ ಮಹಾನ್ ಸಾಧನೆಗಳನ್ನು ಮಾಡುತ್ತಿರುವ ಬಗ್ಗೆ ತಾನು ಹಲವಾರು ಉದಾಹರಣೆಗಳನ್ನು ನೀಡಬಲ್ಲೆ . ತಂತ್ರಜ್ಞಾನ ಪ್ರೇರಿತ ಆಡಳಿತ ಹಾಗೂ ಅಭಿವೃದ್ಧಿ ಬಗ್ಗೆ ತನ್ನ ಸರಕಾರ ಹೆಚ್ಚಿನ ಗಮನ ನೀಡುತ್ತಿದೆ’’ ಎಂದವರು ತಿಳಿಸಿದರು.
ಭಾರತಕ್ಕೆ ಈಗ ದಾಖಲೆಯ ಸಂಖ್ಯೆಯಲ್ಲಿ ವಿದೇಶಿ ನೇರ ಹೂಡಿಕೆಯನ್ನು ಹರಿದುಬರುತ್ತಿದ್ದು, ಎಲ್ಲಾ ಹಣಕಾಸು ಸಂಘಟನೆಗಳು ಹಾಗೂ ವಿತ್ತಶಾಸ್ತ್ರಜ್ಞರು ಭಾರತದ ಬಗ್ಗೆ ಸಕಾರಾತ್ಮಕವಾದ ರೇಟಿಂಗ್ ನೀಡುತ್ತಿದ್ದಾರೆಂದರು. ಹೂಡಿಕೆಗೆ ಭಾರತವೊಂದು ಶ್ರೇಷ್ಠವಾದ ತಾಣವೆಂಬುದಾಗಿ ಇಡೀ ಜಗತ್ತು ಅದರೆಡೆಗೆ ನೋಡುತ್ತಿರುವುದಾಗಿ ಮೋದಿ ಹೇಳಿದರು.
‘ರಾಜತಾಂತ್ರಿಕತೆಯಲ್ಲಿ ಮಾನವೀಯತೆ ತೋರಿದ ಸುಷ್ಮಾ’
ವಾಶಿಂಗ್ಟನ್,ಜೂ. 26: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ರಾಜತಾಂತ್ರಿಕತೆಗೆ ‘ಮಾನವೀಯ ಮುಖ’ವನ್ನು ನೀಡಿದ್ದಾರೆಂದು ಪ್ರಧಾನಿ ನರೇಂದ್ರ ಮೋದಿ ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ. ಜಗತ್ತಿನ ಯಾವುದೇ ಮೂಲೆಯಲ್ಲಿರುವ ಭಾರತೀಯರಿಗೆ ನೆರವಾಗಲು ಹಾಗೂ ಉತ್ತಮ ಅಡಳಿತವನ್ನು ನೀಡಲು ಅವರು ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರ್ಜಿನಿಯಾದಲ್ಲಿ ರವಿವಾರ ಅನಿವಾಸಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ‘ಸೋಶಿಯಲ್ ಮೆಡಿಯಾಗಳು ಅತ್ಯಂತ ಶಕ್ತಿಯುತವಾಗಿವೆ. ನಾನು ಕೂಡಾ ಅದರೊಂದಿಗೆ ಸಂಪರ್ಕಿಸಲ್ಪಟ್ಟಿದ್ದೇನೆ. ಆದರೆ ಅದನ್ನು ಬಳಸಿಕೊಂಡು ಇಲಾಖೆಯೊಂದನ್ನು ಬಲಪಡಿಸಬಹುದೆಂಬುದಕ್ಕೆ ಸುಷ್ಮಾ ಅವರು ಅತ್ಯುತ್ತಮವಾದ ಉದಾಹರಣೆಯಾಗಿದ್ದಾರೆ’’ ಎಂದರು.
ಜಗತ್ತಿನ ಯಾವುದೇ ಮೂಲೆಯಲ್ಲಿರುವ ಭಾರತೀಯರಿಗೆ ಟ್ವೀಟ್‌ಗಳ ಮೂಲಕ ಸುಷ್ಮಾ ಸ್ವರಾಜ್ ಉತ್ತರಿಸುತ್ತಾರೆ ಹಾಗೂ ಕಾರ್ಯಪ್ರವೃತ್ತರಾಗುತ್ತಾರೆಂದು ಪ್ರಶಂಸಿದ ಮೋದಿ, ಇಂದು ಭಾರತದ ವಿದೇಶಾಂಗ ಇಲಾಖೆಯು ದೇಶದ ಕಡುಬಡವರೊಂದಿಗೂ ಸಂಪರ್ಕಿಸಲ್ಪಟ್ಟಿದೆ ಎಂದರು.







