ಶ್ರೀಕೃಷ್ಣ ಮಠದಲ್ಲಿ ಇಫ್ತಾರ್ ಕೂಟ: ಜು.2ರಂದು ರಾಜ್ಯಾದ್ಯಂತ ಪ್ರತಿಭಟನೆ
ಉಡುಪಿ, ಜೂ.26: ಪರ್ಯಾಯ ಪೇಜಾವರ ಮಠದ ವತಿಯಿಂದ ಜೂ. 24ರಂದು ಇಲ್ಲಿನ ಶ್ರೀಕೃಷ್ಣ ಮಠದಲ್ಲಿ ಆಯೋಜಿಸಲಾಗಿದ್ದ ಇಫ್ತಾರ್ ಕೂಟವನ್ನು ವಿರೋಧಿಸಿ ಶ್ರೀರಾಮಸೇನೆ ಜು.2ರಂದು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ಶ್ರೀರಾಮಸೇನೆಯ ಸ್ಥಾಪಕ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
ಸೋಮವಾರ ಬೆಳಗ್ಗೆ ಉಡುಪಿಗೆ ಧಾವಿಸಿ ಬಂದು ಈ ವಿಷಯದಲ್ಲಿ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ರೊಂದಿಗೆ ಚರ್ಚೆ ನಡೆಸಿದರೂ ಅವರ ಮನ ಒಲಿಸಲು ವಿಫಲರಾಗಿದ್ದ ಮುತಾಲಿಕ್, ಅನಂತರ ಪಕ್ಷದ ಮುಖಂಡರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ ಬಳಿಕ ಇದರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ ಎಂದು ಸಂಜೆ ಸುದ್ದಿಗಾರರಿಗೆ ತಿಳಿಸಿದರು.
ಶ್ರೀಮಠದಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸುವ ಮೂಲಕ ಸ್ವಾಮೀಜಿ ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸಿದ್ದಾರೆ. ಇದರಿಂದ ಇಡೀ ಹಿಂದು ಸಮಾಜಕ್ಕೆ ಅವಮಾನವಾಗಿದೆ. ಗೋಮಾಂಸ ಭಕ್ಷಕರಿಗೆ ಮಠದ ಆವರಣಕ್ಕೆ ಪ್ರವೇಶ ನೀಡಿದ್ದು ಹಾಗೂ ನಮಾಝ್ ಸಲ್ಲಿಸಲು ಅವಕಾಶ ನೀಡಿದ್ದು ಸಹ್ಯವಲ್ಲ. ಇದನ್ನು ವಿರೋಧಿಸಿ ಜು.2ರಂದು ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದೇವೆ ಎಂದು ಪ್ರಮೋದ್ ಮುತಾಲಿಕ್ ಸುದ್ದಿಗಾರರಿಗೆ ತಿಳಿಸಿದರು. ಯಾವ ಮಾದರಿಯಲ್ಲಿ ಪ್ರತಿಭಟನೆ ನಡೆಸಬೇಕು ಎಂಬುದರ ಕುರಿತು ಮುಂದೆ ಯೋಚಿಸಿ ನಿರ್ಧರಿಸಲಾಗುವುದು ಎಂದರು.







