ಜನೌಷಧಿ ಕೇಂದ್ರದ ಲಾಭ ಬಡವರಿಗೆ ಸಿಗಲಿ: ಪೇಜಾವರಶ್ರೀ

ಉಡುಪಿ, ಜೂ.26: ಆರೋಗ್ಯ ಸೇವೆ ಎಂಬುದು ಇಂದಿನ ದಿನಗಳಲ್ಲಿ ತುಂಬಾ ತುಟ್ಟಿಯಾಗಿದ್ದು, ಈ ನಿಟ್ಟಿನಲ್ಲಿ ಇಲ್ಲಿ ಪ್ರಾರಂಭಗೊಂಡಿರುವ ಪ್ರಧಾನಮಂತ್ರಿ ಜನೌಷಧಿ ಕೇಂದ್ರದ ಲಾಭ ಬಡವರಿಗೆಲ್ಲಾ ಸಿಗುವಂತಾಗಲಿ ಎಂದು ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಹೇಳಿದ್ದಾರೆ.
ರವಿವಾರ ಉಡುಪಿ ಶ್ರೀಕೃಷ್ಣಮಠದ ಬಳಿಯ ಬಡಗುಪೇಟೆಯಲ್ಲಿರುವ ನಾನಾಲಾಲ್ ಆರ್ಕೇಡ್‌ನಲ್ಲಿ ನೇಷನಲ್ ಯುವ ಕೋ ಆಪರೇಟಿವ್ ಸೊಸೈಟಿ ಸಹಯೋಗದೊಂದಿಗೆ ಪ್ರಾರಂಭಗೊಂಡ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡುತಿದ್ದರು.
ಶ್ರೀಕೃಷ್ಣ ಮಠದ ಮಧ್ವಮಂಟಪದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಪೇಜಾವರ ಶ್ರೀ, ಬಡವರಿಗಾಗಿ ತಂದಿರುವ ಈ ಯೋಜನೆಯ ಸಂಪೂರ್ಣ ಪ್ರಯೋಜನ ಅವರಿಗೆ ದೊರೆತು, ಎಲ್ಲರೂ ಸುಖವಾಗಿ ಬಾಳಲು, ದು:ಖಮುಕ್ತ ರಾಗಿ ಬದುಕಲು ಸಾಧ್ಯವಾಗಲಿ ಎಂದು ಹಾರೈಸಿದರು.
ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ ಮಾತನಾಡಿ ಆಯುರ್ವೇದ ವೈದ್ಯಪದ್ಧತಿ ಪರಿಣಾಮಕಾರಿ ಔಷಧಿಯಾಗಿದ್ದರೂ, ಜನರಿಗೆ ಇದರ ಬಗ್ಗೆ ಸಂಪೂರ್ಣ ಜ್ಞಾನ ಇಲ್ಲವಾಗಿದೆ. ಇದರಿಂದ ಬಡವರು ಆಧುನಿಕ ಔಷಧಿಗೆ ಮೊರೆ ಹೋಗುತಿದ್ದಾರೆ. ಖಾಸಗಿ ವೈದ್ಯರು ಲಾಭದ ದೃಷ್ಟಿಯಿಂದ ಈ ಔಷಧಿ ತೆಗೆದುಕೊಳ್ಳಲು ಸೂಚಿಸುವುದು ವಿರಳ. ಕಂಪೆನಿಯವರು ಕೇವಲ ಲಾಭವನ್ನು ಮಾತ್ರ ನಿರೀಕ್ಷಿಸುತ್ತಾರೆ. ಆದ್ದರಿಂದ ಜನರ ಸಹಕಾರದಿಂದ ಮಾತ್ರ ಸರಕಾರದ ಈ ಪ್ರಯತ್ನ ಯಶಸ್ಸು ಪಡೆಯಲು ಸಾಧ್ಯ ಎಂದರು.
ಪೇಜಾವರ ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ನಗರಸಭಾ ಸದಸ್ಯ ಶ್ಯಾಮಪ್ರಸಾದ್ ಕುಡ್ವ ಉಪಸ್ಥಿತರಿದ್ದರು. ರಾಜ್‌ಶಂಕರ್ ವಂದಿಸಿದರು.
ಇದಕ್ಕೆ ಮುನ್ನ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಜನೌಷಧಿ ಕೇಂದ್ರವನ್ನು ಉದ್ಘಾಟಿಸಿದರು. ಸಂಸದೆ ಶೋಭಾ ಕರಂದ್ಲಾಜೆ, ಜಿಪಂ ಅಧ್ಯಕ್ಷ ದಿನಕರ ಬಾಬು, ಬಿಜೆಪಿ ನಾಯಕರಾದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಉದಯ ಕುಮಾರ್ ಶೆಟ್ಟಿ, ಕೇಂದ್ರದ ಉಡುಪಿ ಉಸ್ತುವಾರಿ ಅಭಿಷೇಕ್ ಎನ್.ರಾವ್ ಉಪಸ್ಥಿತರಿದ್ದರು.







