ಮಂಗಳೂರು: ವಿದ್ಯಾರ್ಥಿಗೆ ಹಲ್ಲೆ; ಉಪನ್ಯಾಸಕರಿಗೆ ತರಾಟೆ
ಎರಡು ಪ್ರತ್ಯೇಕ ಘಟನೆ
ಮಂಗಳೂರು, ಜೂ. 26: ನಗರದ ಸಿಟಿ ಸೆಂಟಲ್ ಮಾಲ್ ಮತ್ತು ಕಾರ್‌ಸ್ಟ್ರೀಟ್‌ನಲ್ಲಿ ಸೋಮವಾರ ಸಂಜೆ ಯುವತಿಯರ ವಿಷಯದಲ್ಲಿ ಎರಡು ಘಟನೆಗಳು ನಡೆದಿದೆ.
ಸಿಟಿ ಸೆಂಟರ್‌ಮಾಲ್‌ನಲ್ಲಿ ಸಂಜೆ ವೇಳೆಗೆ ಯುವತಿಯೋರ್ವಳನ್ನು ಚುಡಾಯಿಸಲಾಯಿತು ಎಂದು ಆರೋಪಿಸಿ ಸುರತ್ಕಲ್ ಚೊಕ್ಕಬೆಟ್ಟುವಿನ ಇಂಜಿನಿಯರಿಂಗ್ ವಿದ್ಯಾರ್ಥಿ ಮನೋಜ್ (19) ಮೇಲೆ ತಂಡವೊಂದು ಹಲ್ಲೆ ನಡೆಸಿದೆ. ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬಂದರು ಪೊಲೀಸರು 5 ಮಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಸಿಸಿಟಿವಿ ಫೂಟೇಜ್ ತಪಾಸಣೆ: ಮಾಲ್‌ನ ಒಳಗಡೆ ಹಲ್ಲೆ ಘಟನೆ ನಡೆದ ಕಾರಣ ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ನಿಟ್ಟಿನಲ್ಲಿ ಆರೋಪಿಗಳ ಬಂಧನ ಮತ್ತು ತನಿಖೆಗಾಗಿ ಬಂದರು ಪೊಲೀಸ್ ಸಿಸಿಟಿವಿ ಫೂಟೇಜ್ ದಾಖಲೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಕಾರ್‌ಸ್ಟ್ರೀಟ್‌ನಲ್ಲಿ ಮಳಿಗೆಯೊಂದಕ್ಕೆ ಪುಸ್ತಕ ಖರೀದಿಸಲು ಇಬ್ಬರು ಉಪನ್ಯಾಸಕರು ಮತ್ತು ಓರ್ವ ಉಪನ್ಯಾಸಕಿ ತೆರಳಿದ್ದು, ಪುಸ್ತಕ ಖರೀದಿಯ ಬಳಿಕ ಪಕ್ಕದ ಅಂಗಡಿಯಲ್ಲಿ ಮೂವರೂ ಚುರುಮುರಿ ತಿನ್ನುತ್ತಿದ್ದರು ಎನ್ನಲಾಗಿದೆ. ಆಗ ಎರಡು ಬೈಕ್‌ಗಳಲ್ಲಿ ಅಲ್ಲಿಗೆ ಬಂದ ನಾಲ್ವರು ಉಪನ್ಯಾಸಕಿ ಜತೆಗಿದ್ದ ಉಪನ್ಯಾಸಕರನ್ನು ಬೈದು ನಿಂದಿಸಿದ್ದಲ್ಲದೆ ಬಳಿಕ ಉಪನ್ಯಾಸಕಿಯ ತಂದೆಯನ್ನು ಕರೆಸಿ ಆಕೆಯನ್ನು ಕಳುಹಿಸಿಕೊಟ್ಟರು ಎನ್ನಲಾಗಿದೆ.







