ಕೆಐಎಡಿಬಿ ಹಳೆ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ನಿರ್ಣಯ: ರಾಜ್ಯ ಸರಕಾರದ ಕ್ರಮಕ್ಕೆ ಸ್ವಾಗತ

ಮಂಗಳೂರು, ಜೂ. 27: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತನತ್ವದ ರಾಜ್ಯ ಸರಕಾರದ ಸಂಪುಟ ಸಭೆಯು ಇತ್ತೀಚೆಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಯ 1966ರ ಭೂಸ್ವಾಧಿನ ಕಾಯ್ದೆಗೆ ತಿದ್ದುಪಡಿ ತರಲು ಕೈಗೊಂಡ ನಿರ್ಣಯವನ್ನು ಸ್ವಾಗತಿಸುವುದಾಗಿ ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆ ಮತ್ತು ಕೃಷಿ ಭೂಮಿ ಸಂರಕ್ಷಣಾ ಸಮಿತಿ ತಿಳಿಸಿದೆ.
ಜಂಟಿ ಪತ್ರಿಕಾಗೋಷ್ಠಿಯಲ್ಲಿಂದು ಸಚಿವ ಸಂಪುಟದ ನಿರ್ಧಾರವನ್ನು ಮಹತ್ವದ ತೀರ್ಮಾನ ಎಂದು ತಿಳಿಸಿದ ವೇದಿಕೆಯ ಸಂಯೋಜಕಿ ವಿದ್ಯಾ ದಿನಕರ್, ಇದರಿಂದಾಗಿ ಎಂಆರ್‌ಪಿಎಲ್‌ನ 4ನೆ ಹಂತದ ವಿಸ್ತರಣೆಗೆ ಭೂಸ್ವಾಧೀನಕ್ಕಾಗಿ ಕೆಐಎಡಿಬಿಯಿಂದ ನೀಡಲಾದ ನೋಟೀಸು ಅಮಾನ್ಯವಾಗಲಿದೆ ಎಂದರು.
ಕೆಐಎಡಿಬಿ ಮೂಲಕ ಭೂಸ್ವಾಧೀನತೆಗೆ ಕೇಂದ್ರ ಸರಕಾರ ಕಾರ್ಯರೂಪಕ್ಕೆ ತಂದಿರುವ ‘ಭೂಸ್ವಾಧೀನ, ಪುನರ್ವಸತಿ ಮತ್ತು ಪುನನಿರ್ಮಾಣ ಅಧಿನಿಯಮ 2013ರ ನೀತಿಯನ್ನು ಅಳವಡಿಸಿಯೇ ರಾಜ್ಯ ಸರಕಾರ ಕ್ರಮ ಕೈಗೊಳ್ಳುವುದಾಗಿ ಕಾನೂನು ಸಚಿವರಾದ ಟಿ.ಬಿ. ಜಯಚಂದ್ರ ಸ್ಪಷ್ಟಪಡಿಸಿದ್ದಾರೆ.
2016ರಲ್ಲಿ ಪ್ರಥಮ ಬಾರಿಗೆ ಸಚಿವರನ್ನು ಭೇಟಿಯಾದ ವೇಳೆಯಲ್ಲೇ ಸರಕಾರವು ಹಳೆ ಕೆಐಎಡಿಬಿ ಕಾಯ್ದೆಯನ್ನು ಬಳಸಿ ಬಲಾತ್ಕಾರದ ಭೂಸ್ವಾಧೀನ ಮುಂದುವರಿಸುತ್ತಿದೆ ಎಂಬುದಾಗಿ ಅವರ ಗಮನ ಸೆಳೆದಿದ್ದೆವು. ಇದೀಗ ಸರಕಾರ ಮಹತ್ವದ ತೀರ್ಮಾನದ ಮೂಲಕ ಕೃಷಿ ಭೂಮಿಯನ್ನು ಉಳಿಸಿಕೊಳ್ಳಲು ಅವಕಾಶ ನೀಡಿದೆ ಎಂದವರು ಹೇಳಿದರು.
ಜಂಟಿ ಸಂಘಟನೆಗಳು ಕಳೆದ ಒಂದು ವರ್ಷದಿಂದ ಈ ಬಗ್ಗೆ ಹೋರಾಟ ನಡೆಸುತ್ತಿದ್ದು, ಕೆಐಎಡಿಬಿಯು ಹಳೆ ಕಾಯ್ದೆಯನ್ನು ಬಳಸಿ ಭೂಸ್ವಾಧೀನವನ್ನು ಕೈಬಿಡುವಂತೆ ಅಧಿಕಾರಿಗಳಿಗೆ ಹಾಗೂ ಸರಕಾರಕ್ಕೆ ಮನವಿಯನ್ನು ಸಲ್ಲಿಸಲಾಗಿತ್ತು. ಇದರ ಜತೆಯಲ್ಲೇ ಮುಖ್ಯಮಂತ್ರಿಯನ್ನು ಖುದ್ದು ಭೇಟಿ ಮಾಡಿ ಈ ವಿಚಾರ ತಿಳಿಸಿತ್ತು. ಅವರು ದ.ಕ.ಜಿಲ್ಲಾಧಿಕಾರಿಯಿಂದ ಈ ಬಗ್ಗೆ ವರದಿಯನ್ನು ಕೋರಿದ್ದು, ವರದಿ ಮಾತ್ರ ಇನ್ನೂ ಸಲ್ಲಿಕೆಯಾಗಿಲ್ಲ ಎಂದು ಅವರು ಹೇಳಿದರು.
ಎಂಆರ್‌ಪಿಎಲ್‌ನ ವಿಸ್ತರಣೆಗೆ ಹೊಸತಾಗಿ ಭೂಸ್ವಾಧೀನ ಮಾಡುವ ಅಗತ್ಯವಿಲ್ಲ. ಈಗಾಗಲೇ ಎಸ್‌ಇಝೆಡ್‌ಗಾಗಿ ಸ್ವಾಧೀನ ಪಡಿಸಿಕೊಂಡ ಭೂಮಿ ಸಂಪೂರ್ಣವಾಗಿ ಬಳಕೆಯಾಗಿಲ್ಲ. ಜೆಸ್ಕೋ ಕಂಪನಿಗಾಗಿ 900 ಎಕರೆ ಭೂಮಿಯನ್ನು ಒದಗಿಸಲಾಗಿತ್ತು. ಆದರೆ ಕಂಪನಿ ಇನ್ನೂ ತನ್ನ ಕೈಗಾರಿಕೆಯನ್ನು ಆರಂಭಿಸಿಲ್ಲ. ಕೃಷಿ ಭೂಮಿಯನ್ನು ಕೈಗಾರಿಕಾ ಭೂಮಿಯಾಗಿ ಅದನ್ನು ಪರಿವರ್ತಿಸಲಾಗಿದ್ದರೂ ಬಳಕೆ ಮಾತ್ರ ಆಗಿಲ್ಲ. ಅದು ಇನ್ನೂ ಕೆಐಎಡಿಬಿ ಬಳಿ ಇದೆ. ಹಾಗಿರುವಾಗ ಅಷ್ಟೊಂದು ಜಾಗ ಇರುವಾಗ ಮತ್ತೆ ಭೂಸ್ವಾಧೀನ ನಡೆಸುವುದು ಸರಿಯಲ್ಲ ಎಂದು ನಾವು ಈಗಾಗಲೇ ಒತ್ತಾಯ ಮಾಡಿದ್ದೇವೆ.
ಹಾಗಿದ್ದರೂ ಪೆರ್ಮುದೆ, ಕುತ್ತೆತ್ತೂರು ಮತ್ತು ಇತರ ಗ್ರಾಮಗಳಲ್ಲಿ ಕೃಷಿಯೋಗ್ಯ, ಫಲವತ್ತಾದ ಭೂಮಿಯನ್ನೇ ಬಲಾತ್ಕಾರವಾಗಿ ಸ್ವಾಧೀನಪಡಿಸಿಕೊಳ್ಳಲು ಕೆಐಎಡಿಬಿ ನಿರ್ಧರಿಸಿ 1011 ಎಕರೆ ಭೂಸ್ವಾದೀನಕ್ಕಾಗಿ 2016ರ ಡಿಸೆಂಬರ್ 29ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಇದು 2013ರ ಭೂಸ್ವಾಧೀನ ಕಾಯ್ದೆಗೆ ವಿರುದ್ಧವಾದುದು. 1966ರ ಕಾಯ್ದೆ 2013ರ ಕೇಂದ್ರದ ಹೊಸ ನೀತಿಗಿಂತ ಭಿನ್ನವಾಗಿದ್ದು, ಅದು ದೇಶದ ಸಂವಿಧಾನದ 254(2)ನೇ ಪರಿಚ್ಛೇದದ ನೀತಿಯನ್ವಯ ಸ್ವತಂತ್ರವಾಗಿ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಆನಂದ ಬೈರಾರೆಡ್ಡಿಯವರ ಏಕಸದಸ್ಯ ಪೀಠವು ಅಭಿಪ್ರಾಯ ವ್ಯಕ್ತಪಡಿಸಿದೆ. ಹಾಗಿದ್ದರೂ ಎಂಆರ್‌ಪಿಎಲ್ ಮತ್ತು ಕೆಐಎಡಿಬಿ ಅದನ್ನು ಒಪ್ಪುವ ಮನಸ್ಥಿತಿ ಹೊಂದಿರಲಿಲ್ಲ. ಇದೀಗ ರಾಜ್ಯ ಸರಕಾರದ ಸಚಿವ ಸಂಪುಟ ಕೈಗೊಂಡಿರುವ ನಿರ್ಧಾರ ಆ ಅಕ್ರಮಗಳಿಗೆ ಕಡಿವಾಣ ಹಾಕಲಿದೆ ಎಂದು ಅವರು ತಿಳಿಸಿದರು.
ಗೋಷ್ಠಿಯಲ್ಲಿ ವೇದಿಕೆಯ ಕೋರ್ ಸದಸ್ಯ ರಾಮಚಂದ್ರ ಭಟ್, ಕೃಷಿ ಭೂಮಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಮಧುಕರ ಅಮೀನ್, ಲಾರೆನ್ಸ್ ಡಿಕುನ್ನಾ, ಹೇುಲತಾ ಎಸ್. ಭಟ್ ಉಪಸ್ಥಿತರಿದ್ದರು.







