ಸಾಮೂಹಿಕ ಅತ್ಯಾಚಾರ ಪ್ರಕರಣ : ಆದಿತ್ಯನಾಥ್ ಹಿಂದೂ ಯುವವಾಹಿನಿಯ 3 ಸದಸ್ಯರ ಬಂಧನ

ಬರೇಲಿ,ಜೂ.27 : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ಸ್ಥಾಪಿಸಲ್ಪಟ್ಟ ಹಿಂದೂ ಯುವವಾಹಿನಿಯ ಮೂವರು ಕಾರ್ಯಕರ್ತರನ್ನು ಸಾಮೂಹಿಕ ಅತ್ಯಾಚಾರ ಹಾಗೂ ಪೊಲೀಸ್ ಅಧಿಕಾರಿಯೊಬ್ಬರಿಗೆ ಥಳಿಸಿದ ಪ್ರಕರಣದಲ್ಲಿ ಬಂಧಿಸಲಾಗಿದೆ. ಬಂಧಿತರನ್ನು ಅವಿನಾಶ್, ಜಿತೇಂದ್ರ ಹಾಗೂ ಪಂಕಜ್ ಎಂದು ಗುರುತಿಸಲಾಗಿದೆ. ಅನಿಲ್ ಸಕ್ಸೇನಾ ಎಂಬ ವ್ಯಕ್ತಿಯ ಹೆಸರನ್ನೂ ಅತ್ಯಾಚಾರ ಸಂತ್ರಸ್ತೆ ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾಳೆನ್ನಲಾಗಿದೆ. ಎರಡೂ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಎಫ್ ಐ ಆರ್ ದಾಖಲಾಗಿವೆ.
ನಗರದ ಗಣೇಶನಗರ ಪ್ರದೇಶದಲ್ಲಿ ದೊಡ್ಡ ದನಿಯಲ್ಲಿ ಸಂಗೀತ ಕೇಳಿಸುತ್ತಿರುವುದರ ವಿಚಾರದಲ್ಲಿ ಸೋಮವಾರ ರಾತ್ರಿ ದೀಪಕ್ ಹಾಗೂ ಅವಿನಾಶ್ ನಡುವೆ ಜಗಳವಾಗಿತ್ತು. ಯುವ ವಾಹಿನಿ ಕಾರ್ಯಕರ್ತರಾಗಿದ್ದ ತನ್ನ ಸ್ನೇಹಿತರಿಗೆ ಕರೆ ಕಳುಹಿಸಿದ್ದ ಅವಿನಾಶ್, ಅವರ ಜತೆ ಸೇರಿ ದೀಪಕ್ ಮನೆಗೆ ನುಗ್ಗಿದ್ದು ಅವರು ಅಲ್ಲಿದ್ದ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದರೆನ್ನಲಾಗಿದೆ.
ದೀಪಕ್ ನಂತರ ಅಲ್ಲಿಗೆ ತನ್ನ ಸಹೋದರ ಗೌರವ್ ಜತೆ ತಲುಪಿ ಅವಿನಾಶ್ ಮೇಲೆ ಹಲ್ಲೆಗೈದು ಆತನನ್ನು ಪೊಲೀಸರಿಗೊಪ್ಪಿಸಿದ್ದನು.
ಈ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬುತ್ತಿದ್ದಂತೆಯೇ ಯುವವಾಹಿನಿ ಪ್ರಾದೇಶಿಕ ಘಟಕದ ಅಧ್ಯಕ್ಷ ಜಿತೇಂದ್ರ ಶರ್ಮಾ ಮತ್ತು ನಗರ ಘಟಕದ ಅಧ್ಯಕ್ಷ ಪಂಕಜ್ ಇತರ ಕಾರ್ಯಕರ್ತರೊಡನೆ ಸೇರಿ ಪೊಲೀಸ್ ಠಾಣೆಯಲ್ಲಿ ಪ್ರತಿಭಟನೆ ನಡೆಸಿದ್ದರು. ನಗರ ಬಿಜೆಪಿ ಅಧ್ಯಕ್ಷ ಉಮೇಶ್ ಕತಾರಿಯಾ ಕೂಡ ಅಲ್ಲಿಗೆ ಆಗಮಿಸಿದ್ದು ಈ ಸಂದರ್ಭ ಯುವವಾಹಿನಿ ಕಾರ್ಯಕರ್ತರು ಅವರೊಡನೆ ಅನುಚಿತವಾಗಿ ವರ್ತಿಸಿ ಎಸ್ಸೈ ಮಾಯಾಂಕ್ ಅರೋರಾ ಮೇಲೆ ಹಲ್ಲೆಗೈದಿದ್ದರೆನ್ನಲಾಗಿದೆ.
ಎರಡೂ ಪ್ರಕರಣಗಳ ತನಿಖೆ ಪ್ರಗತಿಯಲ್ಲಿದೆ.







