ಹಿಂದುತ್ವವಾದಿಗಳಿಂದ ಹಿಂದೂಗಳಿಗೆ ಸಮಸ್ಯೆ: ಸುನೀಲ್‌ಕುಮಾರ್ ಬಜಾಲ್

ಮಂಗಳೂರು, ಜೂ.27: ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಿ, ಜಾತ್ಯತೀತ ಪರಂಪರೆಯನ್ನು ಸರ್ವನಾಶ ಮಾಡಲು ಪ್ರಯತ್ನಿಸುತ್ತಿರುವ ಕೋಮುವಾದಿ ಶಕ್ತಿಗಳಿಂದ ಸಮಸ್ಯೆಗೊಳಗಾಗಿರುವುದು ಹಿಂದೂಗಳೇ ಆಗಿದ್ದಾರೆ ಎಂಬುದನ್ನು ಎಲ್ಲರೂ ಅರಿಯಬೇಕಾಗಿದೆ ಎಂದು ಡಿವೈಎಫ್‌ಐ ಮಾಜಿ ರಾಜ್ಯಾಧ್ಯಕ್ಷ ಸುನೀಲ್ ಕುಮಾರ್ ಬಜಾಲ್ ಹೇಳಿದರು.
ಡಿವೈಎಫ್‌ಐ ಮುಖಂಡ ಶ್ರೀನಿವಾಸ್ ಬಜಾಲ್‌ರ 15ನೆ ವರ್ಷದ ಹುತಾತ್ಮ ದಿನದ ಅಂಗವಾಗಿ ಬಜಾಲ್‌ನಲ್ಲಿ ನಡೆದ ರಕ್ತದಾನ ಶಿಬಿರ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕೋಮುವಾದಿಗಳು ಧರ್ಮಗಳ ನಡುವೆ ಗಲಾಟೆ ಹಬ್ಬಿಸಿ, ಸಾಮರಸ್ಯವನ್ನು ಕದಡುವ ಮೂಲಕ ಅಮಾಯಕ ಯುವಕರ ರಕ್ತ ಹರಿಸಿ ರಾಜಕೀಯ ಲಾಭ ನಡೆಸಲು ಹೊರಟಿದ್ದಾರೆ. ಈ ಹುನ್ನಾರವನ್ನು ಯುವಜನತೆ ಅರ್ಥ ಮಾಡಬೇಕಾಗಿದೆ. ಹಿಂದುತ್ವವಾದಿಗಳಿಗೆ ಹಿಂದೂ ಯುವಕರೇ ಬಲಿಯಾದ ನಿದರ್ಶನ ಬಹಳಷ್ಟಿದೆ. ಉಡುಪಿಯ ಪ್ರವೀಣ್ ಪೂಜಾರಿ, ಬಂಟ್ವಾಳದ ಹರೀಶ್ ಪೂಜಾರಿ, ವಿನಾಯಕ ಬಾಳಿಗ ಹೀಗೆ 15ಕ್ಕೂ ಅಧಿಕ ಹಿಂದೂ ಯುವಕರು ಹಿಂದುತ್ವವಾದಿಗಳಿಂದಲೇ ಬಲಿಯಾಗಿರುವುದನ್ನು ನೆನಪಿಡಬೇಕಾಗಿದೆ. ಇವುಗಳ ನಡುವೆಯೂ ಡಿವೈಎಫ್‌ಐ ಕಾರ್ಯಕರ್ತರು ಶಾಂತಿಸೌಹಾರ್ದತೆಗಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟವರ ಸಾಲಿಗೆ ಶ್ರೀನಿವಾಸ್ ಬಜಾಲ್ ಸೇರುತ್ತಾರೆ. ಪ್ರದೇಶದ ಯುವಕರ ಪ್ರತಿಭೆಗಳಿಗೆ ಪೂರಕವಾದ ಮಾಗದರ್ಶನ ನೀಡುತ್ತಾ, ಕಲೆ, ಸಾಹಿತ್ಯಗಳಲ್ಲಿ ತೊಡಗಿಸಿ ಯುವಜನರ ಪ್ರೀತಿಗೆ ಪಾತ್ರನಾಗಿ ಸ್ಥಳೀಯ ಸಮಸ್ಯೆಗಳಿಗೆ ಧ್ವನಿಯಾಗಿ, ರೋಗಿಗಳಿಗೆ ರಕ್ತದಾನ ಮಾಡುವ ವಿಶೇಷ ಗುಣಗಳನ್ನು ಹೊಂದಿದ್ದ ಶ್ರೀನಿವಾಸ್ ಹುತಾತ್ಮರಾಗಿ 15 ವರ್ಷ ಸಂದರೂ ಅವರ ತ್ಯಾಗ, ಆದರ್ಶಗಳು ಸದಾ ನಮ್ಮಾಂದಿಗೆ ಇರುತ್ತದೆ ಎಂದು ಸುನೀಲ್ ಕುಮಾರ್ ಬಜಾಲ್ ಹೇಳಿದರು.
ವೇದಿಕೆಯಲ್ಲಿ ಡಿವೈಎಫ್‌ಐ ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಡಾ. ಅಶ್ವಿನಿ, ಸ್ಥಳೀಯ ಮುಖಂಡರಾದ ರಿತೇಶ್ ಪಕ್ಕಲಡ್ಕ ಉಪಸ್ಥಿತರಿದ್ದರು. ಪಕ್ಕಲಡ್ಕ ಘಟಕದ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಸ್ವಾಗತಿಸಿದರು. ಕೌಶಿಕ್ ಶೆಟ್ಟಿ ವಂದಿಸಿದರು. ಧೀರಾಜ್ ಪಕ್ಕಲಡ್ಕ ಕಾರ್ಯಕ್ರಮ ನಿರೂಪಿಸಿದರು.







