ಕಟ್ಟಡ ನಿರ್ಮಾಣ ಕಾರ್ಮಿಕರ ಸಮಾವೇಶ

ಮಂಗಳೂರು, ಜೂ.27: ಮೂರು ವರ್ಷಗಳ ಹಿಂದೆ ದೇಶದಲ್ಲಿ ಅಬ್ಬರದ ಪ್ರಚಾರದೊಂದಿಗೆ, ಜನರಲ್ಲಿ ಭ್ರಮೆಯನ್ನು ಸೃಷ್ಟಿಸಿ ಅಧಿಕಾರಕ್ಕೇರಿದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ನಿರಂತರವಾಗಿ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸುವ ಮೂಲಕ ದೇಶದ ಕಾರ್ಮಿಕ ವರ್ಗಕ್ಕೆ ದ್ರೋಹವೆಸಗಿದೆ ಎಂದು ಸಿಐಟಿಯು ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಹೇಳಿದರು.
ನಗರದ ಬೋಳಾರದಲ್ಲಿ ಜರಗಿದ ಸಿಐಟಿಯು ಸಂಯೋಜಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್(ರಿ)ನ ದ.ಕ. ಜಿಲ್ಲಾ ಸಂಘಟನಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವದೇಶಿ ಮಂತ್ರವನ್ನು ಬದಿಗೆ ಸರಿಸಿ ಅಮೇರಿಕನ್ ಸಾಮ್ರಾಜ್ಯಶಾಹಿಗಳೊಂದಿಗೆ ಕಿರಿಯ ಪಾಲುದಾರರಾಗುವ ಮೂಲಕ ಬಂಡವಾಳಶಾಗಳ ಹಿತಾಸಕ್ತಿಗಳನ್ನು ಕಾಯುತ್ತಿದೆ. ಒಳ್ಳೆಯ ದಿನಗಳು ಬಂದಿರುವುದು ದೇಶದ ಆಗರ್ಭ ಶ್ರೀಮಂತರಿಗೆ ಹೊರತು ಜನಸಾಮಾನ್ಯರಿಗಲ್ಲ. ಆಳುವ ವರ್ಗದ ಇಂತಹ ಕಾರ್ಮಿಕ ವಿರೋಧಿ ನೀತಿಗಳನ್ನು ಸೋಲಿಸಬೇಕಾದರೆ ಬಲಿಷ್ಠವಾದ ಕಾರ್ಮಿಕ ಚಳವಳಿಯನ್ನು ಕಟ್ಟಬೇಕಾಗಿದೆ. ಈ ಮೂಲಕ ದೇಶವನ್ನು ರಕ್ಷಿಸಲು ಕಾರ್ಮಿಕ ವರ್ಗ ಮುಂದಾಗಬೇಕು ಎಂದು ಸುನೀಲ್ ಕುಮಾರ್ ಬಜಾಲ್ ಕರೆ ನೀಡಿದರು.
ಸಿಐಟಿಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ ಸಮಾರೋಪ ಭಾಷಣ ಮಾಡಿದರು. ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಜಯಂತ ಯು. ನಾಯಕ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯ ನೂತನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ವಂದಿಸಿದರು.







