ಸಾಲಕ್ಕೆ ಹೆದರಿ ತಾಯಿ-ಮಗನ ಆತ್ಮಹತ್ಯೆ
ಬೆಂಗಳೂರು, ಜೂ.27: ಪಿಜಿ ಹಾಸ್ಟೆಲ್ ವ್ಯವಹಾರದಲ್ಲಿ ನಷ್ಟವುಂಟಾದ ಪರಿಣಾಮ ನೊಂದ ತಾಯಿ ಹಾಗೂ ಮಗ ಹಬ್ಬದ ದಿನವೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಕೇರಳ ಮೂಲದವರಾದ ಸುಮಿದಾ(42) ಹಾಗೂ ಮಗ ಮುಹಮ್ಮದ್ ನಾಜಿಮ್(25) ಆತ್ಮಹತ್ಯೆ ಮಾಡಿಕೊಂಡಿರುವ ತಾಯಿ-ಮಗ. ಕಳೆದ ಐದು ವರ್ಷಗಳ ಹಿಂದೆ ಮುಹಮ್ಮದ್ ನಿಜಾಮ್ ಎಂಬುವವರು ಪತ್ನಿ ಹಾಗೂ ಮೂವರು ಗಂಡು ಮಕ್ಕಳೊಂದಿಗೆ ಬೆಂಗಳೂರಿನ ಮೇಡರಹಳ್ಳಿಯಲ್ಲಿ ಕಟ್ಟಡವೊಂದನ್ನು ಬಾಡಿಗೆಗೆ ಪಡೆದಿದ್ದರು. ಅದರಲ್ಲಿ ನೆಲ ಮಹಡಿಯಲ್ಲಿ ವಾಸ ಮಾಡುತ್ತಾ, ಮೊದಲ ಮಹಡಿಯಲ್ಲಿ ಪಿಜಿ ಹಾಸ್ಟೆಲ್ ನಡೆಸುತ್ತಿದ್ದರು.
ಆದರೆ, ಕಳೆದ ಐದಾರು ತಿಂಗಳಿನಿಂದ ಪಿಜಿಯಲ್ಲಿ ನಷ್ಟ ಉಂಟಾಗಿದೆ. ಹಾಸ್ಟೆಲ್ ಮುಂದುವರಿಸಲು ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ರಮಝಾನ್ ದಿನದಂದು ಈ ಕುಟುಂಬ ಹಬ್ಬ ಆಚರಿಸಿದ್ದು, ಒಬ್ಬ ಮಗ ಸ್ನೇಹಿತರು ಹಬ್ಬಕ್ಕೆ ಕರೆದರೆಂದು ಮೆಜಸ್ಟಿಕ್‌ಗೆ ಹೋಗಿದ್ದನು. ರಾತ್ರಿ ವೇಳೆ ಗಂಡ, ಹೆಂಡತಿ ಹಾಗೂ ಮಕ್ಕಳು ಒಟ್ಟಿಗೆ ಊಟ ಮಾಡಿದ್ದಾರೆ. ಹಬ್ಬದ ನಿಮಿತ್ತ ಮೊದಲ ಮಹಡಿಯಲ್ಲಿದ್ದ ಹುಡುಗರು ಊರಿಗೆ ತೆರಳಿದ್ದರಿಂದ ಕೆಲ ಕೊಠಡಿಗಳು ಖಾಲಿ ಇದ್ದವು. ರಾತ್ರಿ ಪತಿ ಮುಹಮ್ಮದ್ ನಿಜಾಮ್ ಹಾಗೂ ಒಬ್ಬ ಮಗ ಕೆಳ ಮಹಡಿಯಲ್ಲಿ ಮಲಗಿದ್ದಾರೆ.
ಮಗ ಮುಹಮ್ಮದ್ ನಾಜಿಮ್ ತಾಯಿ ಜತೆ ಮಲಗುವುದಾಗಿ ಮೊದಲ ಮಹಡಿಗೆ ತೆರಳಿದ್ದಾರೆ. ಈ ವೇಳೆ ಸಾಲದಿಂದ ನೊಂದಿದ್ದ ಇವರಿಬ್ಬರು ಆತ್ಮಹತ್ಯೆಗೆ ನಿರ್ಧರಿಸಿ ಖಾಲಿಯಿದ್ದ ಒಂದು ಕೊಠಡಿಯಲ್ಲಿ ಮಗ ಸೀರೆಯಿಂದ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರೆ, ಮತ್ತೊಂದು ಕೊಠಡಿಯಲ್ಲಿ ತಾಯಿಯೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬೆಳಗ್ಗೆ ಮುಹಮ್ಮದ್ ನಿಜಾಮ್ ಪತ್ನಿ-ಮಗ ನಿದ್ದೆ ಎದ್ದಿಲ್ಲವೆಂದು ಕೋಣೆಗೆ ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಸೋಲದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.







