ಪಠ್ಯದಲ್ಲಿ ಕೆಂಪೇಗೌಡರಿಲ್ಲದಿರುವುದು ವಿಷಾದನೀಯ: ಡಿ.ವಿ.ಸದಾನಂದಗೌಡ

ಬೆಂಗಳೂರು, ಜೂ.27: ಪಠ್ಯಪುಸ್ತಕಗಳಲ್ಲಿ ನಾಡಪ್ರಭು ಕೆಂಪೇಗೌಡರ ಜೀವನ ಚರಿತ್ರೆಯನ್ನು ಅಳವಡಿಸಬೇಕು, ಇಲ್ಲದಿರುವುದು ವಿಷಾದನೀಯ ಎಂದು ಕೇಂದ್ರದ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಸಾಂಖ್ಯಿಕ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.
ನಗರದ ಮೇಖ್ರಿ ವೃತ್ತದಿಂದ ಆರಂಭವಾದ ಕೆಂಪೇಗೌಡ ಜ್ಯೋತಿಗೆ ಚಾಲನೆ ನೀಡಿ ಮಾತನಾಡಿದ ಅವರು, ಐದು ದಶಕಗಳ ಹಿಂದೆ ಬೆಂಗಳೂರು ನಿರ್ಮಿಸಿದ ನಿರ್ಮಾಪಕನ ಇತಿಹಾಸವನ್ನು ಇಂದಿನ ವಿದ್ಯಾರ್ಥಿಗಳಿಗೆ ತಿಳಿಸದಿರುವುದು ನಾಡಿನ ದುರಂತ ಎಂದು ಬಣ್ಣಿಸಿದರು.
ನಾಡಪ್ರಭು ಕೆಂಪೇಗೌಡರ ಬದುಕು ನಮ್ಮೆಲ್ಲರ ಆದರ್ಶವಾಗಬೇಕು. ಹೀಗಾಗಿ ಅವರ ಜೀವನ ವೌಲ್ಯಗಳನ್ನು ಶಾಶ್ವತವಾಗಿ ಉಳಿಯುವಂತೆ ಮಾಡಲು ಪಠ್ಯಪುಸ್ತಕಗಳಲ್ಲಿ ಅಳವಡಿಸಬೇಕಾಗಿದೆ. 2018ಕ್ಕೆ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರಲಿದೆ. ಆಗ ನಾಡಪ್ರಭುವಿನ ಇತಿಹಾಸವನ್ನು ಪಠ್ಯಪುಸ್ತಕದಲ್ಲಿ ಅಳವಡಿಸಲಾಗುವುದು ಎಂದು ಸದಾನಂದಗೌಡರು ಭರವಸೆ ನೀಡಿದರು.
ಐದು ದಶಕಗಳ ಹಿಂದೆಯೇ ಸ್ಮಾರ್ಟ್ ಸಿಟಿ ಯೋಜನೆಯ ಬಗ್ಗೆ ಕೆಂಪೇಗೌಡರಿಗೆ ಅರಿವಿತ್ತು. ಹೀಗಾಗಿಯೇ ಅವರು ನಗರದೆಲ್ಲೆಡೆ ಕೆರೆಕುಂಟೆಗಳನ್ನು ಸ್ಥಾಪಿಸುವುದರ ಜತೆಗೆ ಪರಿಸರ ಕಾಪಾಡುವ ಬಗ್ಗೆ ಕಾಳಜಿ ಹೊಂದಿದ್ದರು. ಆದರೆ, ಇಂದಿನ ಪೀಳಿಗೆ ಪರಿಸರ ನಾಶ ಮಾಡಿ ಇಡೀ ಬೆಂಗಳೂರು ಅವನತಿಯತ್ತ ಸಾಗುವಂತೆ ಮಾಡಿದೆ. ಈಗಲೂ ಕಾಲ ಮಿಂಚಿಲ್ಲ. ನಾಡಪ್ರಭು ಕೆಂಪೇಗೌಡರ ಆಡಳಿತಾತ್ಮಕ ಸೂತ್ರವನ್ನು ಅಳವಡಿಸಿಕೊಂಡರೆ ಭವಿಷ್ಯದಲ್ಲಿ ಬೆಂಗಳೂರನ್ನು ಶಕ್ತಿಶಾಲಿ ನಗರವನ್ನಾಗಿ ಮಾಡಬಹುದು ಎಂದರು.
ಈ ಸಂದರ್ಭದಲ್ಲಿ ನಟರಾದ ಪುನೀತ್ ರಾಜ್‌ಕುಮಾರ್, ಜಗ್ಗೇಶ್, ಶಾಸಕ ಅಶ್ವತ್ಥನಾರಾಯಣ್ ಸೇರಿದಂತೆ ಹಲವು ಮುಖಂಡರು ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.







