ಅಸಂಸ್ಕೃತರಿಂದ ಪಠ್ಯ ಪುಸ್ತಕ ರಚನೆ: ಅದಮಾರು ಶ್ರೀ ಟೀಕೆ

ಉಡುಪಿ, ಜೂ.27: ಇಂದು ಕನ್ನಡ ಮತ್ತು ಸಂಸ್ಕೃತವು ಅಸಂಸ್ಕೃತರ ಕೈಗೆ ಸಿಕ್ಕಿ ಒದ್ದಾಡುತ್ತಿದೆ. ಹೊಟ್ಟೆಕಿಚ್ಚು ತುಂಬಿಕೊಂಡವರು ಇಂದು ಪಠ್ಯಪುಸ್ತಕಗಳನ್ನು ರಚನೆ ಮಾಡುತ್ತಿದ್ದಾರೆ. ಇದರ ಪರಿಣಾಮ ಅರ್ಥರಹಿತ ಹಾಗೂ ಅಸಂಬದ್ಧ ಕನ್ನಡ ಪಠ್ಯಗಳು ರಚನೆಯಾಗುತ್ತಿವೆ ಎಂದು ಅದಮಾರು ಮಠಾಧೀಶ ಶ್ರೀವಿಶ್ವ ಪ್ರಿಯ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ ಪೂರ್ಣಪ್ರಜ್ಞ ಕಾಲೇಜು ಹಾಗೂ ಮಂಗಳೂರು ವಿವಿ ಸಂಸ್ಕೃತ ಶಿಕ್ಷಕ ಸಂಘದ ಸಹಯೋಗದೊಂದಿಗೆ ಮಂಗಳವಾರ ಕಾಲೇಜಿನ ಮಿನಿ ಆಡಿ ಟೋರಿಯಂನಲ್ಲಿ ಆಯೋಜಿಸಲಾದ ಪದವಿ ತರಗತಿಗಳ ಸಂಸ್ಕೃತ ಪಠ್ಯ ವಿಷಯಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಪಠ್ಯ ಪುಸ್ತಕಗಳ ಮೂಲಕ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕೆ ಹೊರತು ಅದರಲ್ಲಿ ಅವರಿಗೆ ನಮ್ಮ ಸಂಸ್ಕೃತಿಯ ಬಗ್ಗೆ ಅಸಡ್ಡೆ ಬರುವ ರೀತಿಯ ಚಿತ್ರಣ ಇರಬಾರದು. ಪಠ್ಯದಲ್ಲಿರುವುದನ್ನು ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳುವಂತಾಗಬೇಕು. ಆದುದರಿಂದ ಸರಕಾರ ಪಠ್ಯಪುಸ್ತಕ ರಚನೆ ಕೆಲಸ ಸುಸಂಸ್ಕೃತರ ಕೈಗೆ ಒಪ್ಪಿಸಲಿ. ಅದು ಬಿಟ್ಟು ಹೊಟ್ಟೆಕಿಚ್ಚು ತುಂಬಿದವರಿಗೆ ನೀಡ ಬಾರದು ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಕಾಲೇಜು ಆಡಳಿತ ಮಂಡಳಿಯ ಗೌರವ ಕೋಶಾ ಧಿಕಾರಿ ಪ್ರದೀಪ್ ಕುಮಾರ್, ಉಡುಪಿ ಶ್ರೀಮನ್‌ಮಧ್ವ ಸಿದ್ಧಾಂತ ಪ್ರಬೋಧಿನಿ ಸಂಸ್ಕೃತ ಸ್ನಾತಕ- ಸ್ನಾತಕೋತ್ತಕ ಅಧ್ಯಯನ ಕೇಂದ್ರದ ಪ್ರಾಚಾರ್ಯ ಡಾ.ಎನ್. ಲಕ್ಷ್ಮಿನಾರಾಯಣ ಭಟ್ ಮಾತನಾಡಿದರು.







