ವಸತಿ ನಿಲಯಗಳ ನೌಕರರ ಖಾಯಂಗೆ ಆಗ್ರಹಿಸಿ ಪ್ರತಿಭಟನೆ

ಬೆಂಗಳೂರು, ಜೂ.27: ರಾಜ್ಯಾದ್ಯಂತ ಸರಕಾರಿ ವಸತಿ ನಿಲಯಗಳು, ಮೊರಾರ್ಜಿ ದೇಸಾಯಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಸೇರಿದಂತೆ ಇನ್ನಿತರೆ ವಸತಿ ನಿಲಯಗಳಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ನೌಕರರನ್ನು ಖಾಯಂ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರದ ಸಿಟಿ ರೈಲು ನಿಲ್ದಾಣದ ಎದುರು ಹಾಸ್ಟೆಲ್ ನೌಕರರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ನಿತ್ಯಾನಂದಸ್ವಾಮಿ, ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಇರುವ ಎಸ್ಸಿ, ಎಸ್ಟಿ, ಹಿಂದುಳಿದ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ, ಮೊರಾರ್ಜಿ ದೇಸಾಯಿ ವಸತಿ ನಿಲಯಗಳಲ್ಲಿ ಅಡುಗೆ, ಸ್ವಚ್ಛತೆ, ಕಾವಲು ಮುಂತಾದ ಕೆಲಸಗಳನ್ನು ಮಾಡುತ್ತಿರುವ ನೌಕರರು ಹತ್ತಾರು ವರ್ಷಗಳಿಂದ ಗುತ್ತಿಗೆ, ದಿನಗೂಲಿ ನೌಕರರರಾಗಿ ದುಡಿಯುತ್ತಿದ್ದಾರೆ. ಖಾಯಂ ಸ್ಪರೂಪದ ಕೆಲಸಕ್ಕಾಗಿ ಅವರನ್ನು ನಿಯೋಜಿಸಲಾಗಿದ್ದರೂ ನೌಕರರನ್ನು ಖಾಯಂಗೊಳಿಸಿ ಅವರಿಗೆ ಕಾನೂನು ಬದ್ಧವಾಗಿ ವೇತನ ಮತ್ತು ಇನ್ನಿತರೆ ಸೌಲಭ್ಯಗಳನ್ನು ಸರಿಯಾಗಿ ನೀಡುತ್ತಿಲ್ಲ. ಒಂದೊಂದು ಜಿಲ್ಲೆಯಲ್ಲಿ ಒಂದೊಂದು ರೀತಿಯ ವೇತನ ನೀಡಲಾಗುತ್ತಿದೆ. ಕೆಲವು ಜಿಲ್ಲೆಗಳಲ್ಲಿ ಎನ್‌ಜಿಓಗಳ ಮೂಲಕ ಗುತ್ತಿಗೆ ಆಧಾರದಲ್ಲಿ ದುಡಿಸಲಾಗುತ್ತಿದೆ. ಗುತ್ತಿಗೆದಾರರು ತಿಂಗಳುಗಟ್ಟಲೇ ಸಂಬಳ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ನೌಕರರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಗಮನ ಹರಿಸುತ್ತಿಲ್ಲ. ಹಲವು ಮುಷ್ಕರ, ಪ್ರತಿಭಟನೆ ನಡೆಸಿ ಸರಕಾರದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಸಚಿವರು ಪ್ರತಿಬಾರಿ ನೌಕರರಿಗೆ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ. ಹೀಗಾಗಿ ಕೂಡಲೇ ಸರಕಾರ ನೌಕರರ ಬೇಡಿಕೆಗಳನ್ನು ಒಪ್ಪಿಕೊಂಡು ಲಿಖಿತ ರೂಪದಲ್ಲಿ ಭರವಸೆ ನೀಡಬೇಕು. ಇಲ್ಲದಿದ್ದರೆ ಮುಷ್ಕರವನ್ನು ಕೈ ಬಿಡುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.
ಐದು ವರ್ಷ ನರಂತರ ಸೇವೆ ಸಲ್ಲಿಸಿದ ಎಲ್ಲ ಹಾಸ್ಟೆಲ್ ಹಾಗೂ ವಸತಿ ಶಾಲೆ ದಿನಗೂಲಿ ನೌಕರರ ಸೇವೆಯನ್ನು ಕಾಯಂಗೊಳಿಸಿ ಅವರನ್ನು ಸರಕಾರಿ ನೌಕರರೆಂದು ಘೋಷಿಸಬೇಕು. ಎನ್‌ಜಿಓಗಳ ಮೂಲಕ ಮೂಲಕ ದುಡಿಸುವುದನ್ನು ಕೈ ಬಿಡಬೇಕು. ಹಾಸ್ಟೆಲ್ ನೌಕರರಿಗೆ ವೇತನ ಹಾಗೂ ತುಟ್ಟಿಭತ್ತೆ ಸೇರಿ ತಿಂಗಳಿಗೆ ಕನಿಷ್ಠ 10 ಸಾವಿರ ರೂ.ಗಳಷ್ಟು ವೇತನ ನೀಡಬೇಕು. ಅದುವರೆಗೂ 2009ರ ಗೆಜೆಟ್ ನೋಟಿಫಿಕೇಷನ್ ನಿಗದಿಪಡಿಸಿದ ಮೂಲ ವೇತನ ಹಾಗೂ ತುಟ್ಟಿಭತ್ತೆ ಸಹಿತ ಸಂಬಳವನ್ನು ಯಾವುದೇ ತಾರತಮ್ಯವಿಲ್ಲದೆ ಸಂದಾಯ ಮಾಡಬೇಕು.
ಕಾರ್ಮಿಕರಿಗೆ ಅನ್ವಯವಾಗುವ ಎಲ್ಲ ಕಾನೂನು ಸೌಲಭ್ಯಗಳನ್ನು ಹಾಸ್ಟೆಲ್ ಮತ್ತು ವಸತಿ ಶಾಲೆ ಗುತ್ತಿಗೆ, ದಿನಗೂಲಿ ನೌಕರರಿಗೂ ನೀಡಬೇಕು. ಖಾಯಂ ಅಥವಾ ಗುತ್ತಿಗೆ ಎಂಬ ಭೇದವಿಲ್ಲದ ಪ್ರತಿ ತಿಂಗಳ 10ನೆ ತಾರಿಕಿನೊಳಗೆ ಅವರ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ವೇತನವನ್ನು ಜಮಾ ಮಾಡಬೇಕು. ಹಾಸ್ಟೆಲ್ ನೌಕರರ ವೇತನದಲ್ಲಿ ಕಡಿತ ಮಾಡಲಾದ ಇಎಸ್‌ಐ ಮತ್ತು ಪಿಎಫ್ ಹಣವನ್ನು ಸಂಬಂಧಪಟ್ಟ ಇಲಾಖೆಗೆ ಜಮಾ ಮಾಡಿದ ಬಗ್ಗೆ ದಾಖಲೆಗಳನ್ನು ಒದಗಿಸಬೇಕು. ಹಾಸ್ಟೆಲ್‌ಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಡೆಗಟ್ಟಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪ್ರತಿಭಟನಾಕಾರರು ಸರಕಾರವನ್ನು ಆಗ್ರಹಿಸಿದರು.
ರೈಲ್ವೆ ನಿಲ್ದಾಣದಲ್ಲಿ ತಡೆದ ಪೊಲೀಸರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರದ ಸಿಟಿ ರೈಲು ನಿಲ್ದಾಣದಿಂದ ಸ್ವಾತಂತ್ರ ಉದ್ಯಾನದವರೆಗೂ ರ್ಯಾಲಿ ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ಪೊಲೀಸರು ರ್ಯಾಲಿಗೆ ಅನುಮತಿ ನಿರಾಕರಿಸಿದ ಪರಿಣಾಮ 4-5 ಸಾವಿರ ಗುತ್ತಿಗೆ, ಹೊರಗುತ್ತಿಗೆ ನೌಕರರು ಸಿಟಿ ರೈಲು ನಿಲ್ದಾಣದ ರಸ್ತೆಯಲ್ಲಿ ಪ್ರತಿಭಟನೆ ಮುಂದುವರಿಸಿದರು. ಇದರಿಂದಾಗಿ ರೈಲು ನಿಲ್ದಾಣದ ಬಳಿ ಸಂಚಾರಕ್ಕೆ ಅಡಚಣೆಯುಂಟಾಗಿತ್ತು.







