ಸ್ಪರ್ಧೆ ಸೈದ್ಧಾಂತಿಕವೇ ಹೊರತು ದಲಿತರ ನಡುವಿನ ಸಮರವಲ್ಲ: ಮೀರಾ ಕುಮಾರ್

ಹೊಸದಿಲ್ಲಿ, ಜೂ. 27: ರಾಷ್ಟ್ರಪತಿ ಹುದ್ದೆ ಅಭ್ಯರ್ಥಿಯಾಗಿ ಬಿಜೆಪಿ ನೇತೃತ್ವದ ಎನ್‌ಡಿಎಯಿಂದ ಆಯ್ಕೆಯಾಗಿರುವ ಕೋವಿಂದ್ ಅವರ ವಿರುದ್ಧ ಮಾಧ್ಯಮ ಸ್ವಾತಂತ್ರ, ಸಾಮಾಜಿಕ ನ್ಯಾಯ ಹಾಗೂ ಜಾತಿ ವಿನಾಶದಂತಹ ಮುಖ್ಯ ಸೈದ್ಧಾಂತಿಕತೆಯಲ್ಲಿ ಸಂಘಟಿತರಾಗಿರುವ ಪಕ್ಷಗಳನ್ನು ಪ್ರತಿನಿಧಿಸಿ ತಾನು ಕಣಕ್ಕಿಳಿದಿರುವೆ ಎಂದು ವಿರೋಧ ಪಕ್ಷಗಳ ರಾಷ್ಟ್ರಪತಿ ಹುದ್ದೆ ಅಭ್ಯರ್ಥಿ ಮೀರಾ ಕುಮಾರ್ ಹೇಳಿದ್ದಾರೆ.
ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸಲು ಬೆಂಬಲಿಸುತ್ತಿರುವ 17 ಪಕ್ಷಗಳಿಗೆ ಕೃತಜ್ಞತೆ ಸಲ್ಲಿಸಿರುವ ಅವರು, ತಾನು ಮಹಾತ್ಮಾ ಗಾಂಧಿ ಅವರ ಸಾಬರ್ಮತಿ ಆಶ್ರಮದಿಂದ ಚುನಾವಣಾ ಪ್ರಚಾರ ಆರಂಭಿಸಲಿದ್ದೇನೆ ಎಂದಿದ್ದಾರೆ.
ಮೀರಾ ಕುಮಾರ್ ಇಂದಷ್ಟೇ ನಾಮಪತ್ರ ಸಲ್ಲಿಸಿದರೂ, ರಾಷ್ಟ್ರಪತಿ ಚುನಾವಣೆ ಸಂದರ್ಭ ಆತ್ಮ ಸಾಕ್ಷಿಗೆ ಅನುಗುಣವಾಗಿ ಮತಚಲಾಯಿಸಿ ಎಂದು ಶಾಸಕರು ಹಾಗೂ ಸಂಸದರನ್ನು ಈಗಾಗಲೇ ವಿನಂತಿಸಿದ್ದಾರೆ.
ರಾಷ್ಟ್ರಪತಿ ಹುದ್ದೆಗೆ ಇಬ್ಬರು ದಲಿತರು ಸ್ಪರ್ಧಿಸುತ್ತಿರುವುದರಿಂದ ಚುನಾವಣಾ ಕಣ ಬಿಸಿಯೇರಿದಂತಿದೆ. ಈ ಹಿಂದೆ ರಾಷ್ಟ್ರಪತಿ ಹುದ್ದೆಗೆ ಚುನಾವಣೆ ನಡೆದ ಸಂದರ್ಭ ಅಭ್ಯಥಿಗಳು ಸ್ಪರ್ಧಿಸಿದ್ದಾರೆ ಹೊರತು ಅವರ ಧರ್ಮ ಅಥವಾ ಜಾತಿ ಬಗ್ಗೆ ಚರ್ಚೆ ನಡೆದಿರಲಿಲ್ಲ. ಆದರೆ ಇಂದು ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಎಂದು ಅವರು ಹೇಳಿದ್ದಾರೆ.
ರಾಷ್ಟ್ರಪತಿ ಚನಾವಣೆ ಜುಲೈ 17ರಂದು ನಡೆಯಲಿದ್ದು, ಮೂರು ದಿನಗಳ ಬಳಿಕ ಮತ ಎಣಿಕೆ ನಡೆಯಲಿದೆ.







