ಸೌಹಾರ್ದ ಕಾರ್ಯಕ್ರಮದಲ್ಲಿ ಹುಳುಕು ಹುಡುಕಬೇಡಿ: ಮುತಾಲಿಕ್‌ಗೆ ಪ್ರತಾಪ್ ಸಿಂಹ ತಿರುಗೇಟು
ಉಡುಪಿ ಕೃಷ್ಣಮಠದ ಇಫ್ತಾರ್ ಕೂಟ

ಮಡಿಕೇರಿ, ಜೂ.27: ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಇಫ್ತಾರ್ ಕೂಟ ಆಯೋಜಿಸುವ ಮೂಲಕ ಭಾರತೀಯರೆಲ್ಲರೂ ಒಂದೇ ಎನ್ನುವ ಮನೋಭಾವನೆಯನ್ನು ಪೇಜಾವರ ಶ್ರೀಗಳು ಪ್ರತಿಬಿಂಬಿಸಿದ್ದಾರೆ. ಇದನ್ನು ಯಾರೂ ತಪ್ಪಾಗಿ ಅರ್ಥೈಸುವ ಅಗತ್ಯವಿಲ್ಲ ಎಂದು ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್‌ಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಗಳು ಒಂದಾಗಿ ಬಾಳೋಣ ಎಂಬ ಸಂದೇಶವನ್ನು ನೀಡಿದ್ದಾರೆ. ಇದರಲ್ಲಿ ಹುಳುಕು ಹುಡುಕಬಾರದು ಎಂದರು.
ಜಾತಿ, ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ಒಡಕು ಮೂಡುತ್ತಿರುವ ಕಾಲದಲ್ಲಿ ಪೇಜಾವರ ಶ್ರೀಗಳು ಇಫ್ತಾರ್ ಕೂಟ ಆಯೋಜಿಸಿದ್ದು ಶ್ಲಾಘನಾರ್ಹ. ಮುಸ್ಲಿಮರನ್ನು ಮಠಕ್ಕೆ ಆಹ್ವಾನಿಸುವ ಮೂಲಕ ಭಾರತೀಯರಾದ ನಾವೆಲ್ಲರೂ ಒಂದೇ ಎನ್ನುವ ಸಂದೇಶವನ್ನು ನೀಡಿದ್ದಾರೆ. ಕ್ಷುಲ್ಲಕ ವಿಚಾರಗಳನ್ನು ಮುಂದಿಟ್ಟುಕೊಂಡು ಪರಸ್ಪರ ಟೀಕೆಯಲ್ಲಿ ತೊಡಗುವುದಕ್ಕಿಂತ ಭಾರತೀಯರೆಲ್ಲರೂ ಒಂದೇ ಎನ್ನುವ ಭಾವನೆ ಮೂಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪೇಜಾವರ ಶ್ರೀಗಳು ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.





