ಮುತಾಲಿಕ್ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ: ಎಚ್.ಡಿ ಕುಮಾರಸ್ವಾಮಿ
"ಶ್ರೀ ರಾಮಸೇನೆಯನ್ನು ನಿಷೇಧಿಸಬೇಕು"

ಬೆಳ್ತಂಗಡಿ, ಜೂ.27: ಪೇಜಾವರ ಶ್ರೀಗಳು ಇಫ್ತಾರ್ ಕೂಟ ನಡೆಸಿರುವುದು ಸೌಹಾರ್ಧತೆಯನ್ನು ಸಾಧಿಸುವ ನಿಟ್ಟಿನಲ್ಲಿ ಉತ್ತಮ ವಿಚಾರ. ಹಿರಿಯರಾದ ಅವರ ಬಗ್ಗೆ ಮುತಾಲಿಕ್ ಕೇವಲವಾಗಿ ಮಾತನಾಡುತ್ತಿದ್ದಾರೆ. ಹಿಂದೂ ಧರ್ಮದ ಬಗ್ಗೆ ಮಾತನಾಡಲು ಇವರಿಗೆ ಗುತ್ತಿಗೆ ನೀಡಿದವರು ಯಾರು ಎಂದು ಮಾಜಿ ಮುಖ್ಯಮಂತ್ರಿ, ಜಾತ್ಯಾತೀತ ಜನತಾದಳದ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಧಾರ್ಮಿಕ ಕ್ಷೇತ್ರಗಳ ಭೇಟಿಗಾಗಿ ಧರ್ಮಸ್ಥಳಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಂಸಹಾರಿಗಳನ್ನು ಕೃಷ್ಣ ಮಠಕ್ಕೆ ಕರೆದಿರುವ ಬಗ್ಗೆ ಮುತಾಲಿಕ್ ಆಕ್ಷೇಪವೆತ್ತುತ್ತಿದ್ದಾರೆ. ಶೂದ್ರರಾಗಿರುವ ನಾವೂ ಹಿಂದೂಗಳೇ ಆಗಿದ್ದು, ಮಾಂಸಾಹಾರಿಗಳಾಗಿದ್ದೇವೆ. ನಮಗೂ ಕೃಷ್ಣ ಮಠಕ್ಕೆ ಪ್ರವೇಶ ನೀಡಬಾರದು ಎಂಬುದು ಮುತಾಲಿಕ್ ಆಶಯವೇ ಎಂದು ಪ್ರಶ್ನಿಸಿದರು. ಮುತಾಲಿಕ್ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದು, ಶ್ರೀ ರಾಮಸೇನೆಯನ್ನು ನಿಷೇಧಿಸಬೇಕು ಎಂದರು.
ಚೆಲುವರಾಯ ಸ್ವಾಮಿಯವರದ್ದು ಮುಗಿದ ಅಧ್ಯಾಯ: ಚೆಲುವರಾಯ ಸ್ವಾಮಿಯವರು ಪಕ್ಷಬಿಟ್ಟು ಹೋಗಿದ್ದಾರೆ. ಅವರದ್ದು ಮುಗಿದು ಹೋದ ಅಧ್ಯಾಯ. ಜನತಾಪರಿವಾರದ ನಾಯಕರು ಮತ್ತೆ ಪಕ್ಷಕ್ಕೆ ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜನ ಬರಲಿದ್ದಾರೆ. ಎಚ್. ವಿಶ್ವನಾಥ್ ಅವರ ಸೇರ್ಪಡೆಯ ವಿಚಾರದಲ್ಲಿ ಪಕ್ಷದಲ್ಲಿ ಚರ್ಚೆ ನಡೆಯುತ್ತಿದೆ. ಹಿರಿಯರಾದ ದೇವೇಗೌಡರು ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಅವರ ಸೇರ್ಪಡೆಗೆ ತಮ್ಮ ಯಾವುದೇ ಆಕ್ಷೇಪವಿಲ್ಲ. ಮುಂದಿನ ಚುನಾವಣೆಗೆ ಸಿದ್ಧತೆಗಳು ನಡೆಯುತ್ತಿದ್ದು, ಪಕ್ಷ ಸರ್ವಸನ್ನದ್ಧವಾಗಿದೆ. ಅಭ್ಯರ್ಥಿಗಳ ಪಟ್ಟಿಯನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದು ತಿಳಿಸಿದರು.







