ಆರ್ಡರ್ಲಿ ಪದ್ಧತಿ ಇನ್ನೂ ಜೀವಂತ ಆರೋಪ: ಆರ್.ಕೆ.ದತ್ತ ಸೇರಿ 81 ಅಧಿಕಾರಿಗಳ ವಿರುದ್ಧ ದೂರು
.jpg)
ಬೆಂಗಳೂರು, ಜೂ.27: ಕಾನೂನು ಬಾಹಿರವಾಗಿ ಆರ್ಡರ್ಲಿ ಸೇವೆಯನ್ನು ಮುಂದುವರೆಸಿದ್ದಾರೆ ಎಂದು ಆರೋಪಿಸಿ ಪೊಲೀಸ್ ಮಹಾನಿರ್ದೇಶಕ ಆರ್.ಕೆ.ದತ್ತ ಸೇರಿ 81 ಉನ್ನತ ಪೊಲೀಸ್ ಅಧಿಕಾರಿಗಳ ವಿರುದ್ಧ ರಾಜ್ಯ ಪೊಲೀಸ್ ಪ್ರಾಧಿಕಾರಕ್ಕೆ ವಕೀಲರಾದ ಸುಧಾ ಕಾಟವಾ ದೂರು ಸಲ್ಲಿಸಿದ್ದಾರೆ.
2017ರ ಮಾ.8ರಂದು ರಾಜ್ಯ ಸರಕಾರ ಆರ್ಡರ್ಲಿ ಪದ್ಧತಿ ರದ್ದುಗೊಳಿಸಿದೆ. ಆದರೂ, ಹಿರಿಯ ಪೊಲೀಸ್ ಅಧಿಕಾರಿಗಳು ಪೊಲೀಸ್ ಪೇದೆಗಳನ್ನು ಜೀತದಾಳುಗಳ ರೀತಿ ಮನೆಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಪೊಲೀಸ್ ಮಹಾನಿರ್ದೇಶಕ ಸೇರಿ ಉನ್ನತ ಪೊಲೀಸ್ ಅಧಿಕಾರಿಗಳ ಮನೆಯಲ್ಲಿ ಒಟ್ಟು 133 ಜನ ಈಗಲೂ ಆರ್ಡರ್ಲಿ ಸೇವೆಯಲ್ಲಿದ್ದಾರೆ. ಅದೂ ಅಲ್ಲದೆ, ಸರಕಾರದ ಆದೇಶದ ನಂತರವೂ ಆರು ಜನ ಉನ್ನತ ಪೊಲೀಸ್ ಅಧಿಕಾರಿಗಳು ಪೊಲೀಸ್ ಪೇದೆಗಳನ್ನು ಆರ್ಡರ್ಲಿಗಳನ್ನಾಗಿ ನೇಮಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಪೊಲೀಸ್ ಪೇದೆಗಳನ್ನು ಜೀತದಾಳುಗಳ ರೀತಿ ಹಿರಿಯ ಪೊಲೀಸ್ ಅಧಿಕಾರಿಗಳು ಮನೆ ಕೆಲಸಗಳಿಗೆ ಬಳಸಿಕೊಳ್ಳುತ್ತಿರುವುದರ ವಿರುದ್ಧ ಈ ದೂರು ದಾಖಲಾಗಿದೆ. ಆರ್ಡರ್ಲಿ ಪದ್ಧತಿ ರದ್ದುಗೊಳಿಸಿ ಅನುಯಾಯಿಗಳನ್ನು ನೇಮಕ ಮಾಡಿಕೊಂಡು ಈ ಪದ್ಧತಿಗೆ ಅಂತ್ಯ ಹಾಡುವುದಾಗಿ ಸರಕಾರ ಆದೇಶ ಹೊರಡಿಸಿತ್ತು. ಇಷ್ಟಾದರೂ ಪೊಲೀಸ್ ಸಿಬ್ಬಂದಿಯನ್ನು ಆರ್ಡರ್ಲಿಗಳನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಇದರ ವಿರುದ್ಧ ಪ್ರಾಧಿಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸುಧಾ ಕಾಟವಾ ಮನವಿ ಮಾಡಿದ್ದಾರೆ.
ಆರ್ಡರ್ಲಿಗಳನ್ನು ಹೊಂದಿರುವ ಅಧಿಕಾರಿಗಳು:
ಪೊಲೀಸ್ ಮಹಾನಿರ್ದೇಶಕ ಆರ್.ಕೆ.ದತ್ತ, ಆರ್ಡರ್ಲಿಗಳು: ಅಂಜನ್ ಮೂರ್ತಿ, ಮುನಿಸಿದ್ದಪ್ಪ, ಕುಮಾರ್ ಶ್ರೀನಿವಾಸ, ಚಿಕ್ಕಸ್ವಾಮಿ ಸೇರಿ ಐವರು.
ಎಡಿಜಿಪಿ ಆಡಳಿತ, ಕಮಲ್ ಪಂಥ್, ಆರ್ಡರ್ಲಿಗಳು: ಕೆ.ಆರ್. ಮಹದೇವಯ್ಯ ಸೇರಿ ಮೂವರು.
ನಗರ ಹೆಚ್ಚುವರಿ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ, ಆರ್ಡರ್ಲಿಗಳು: ಎಂ.ಮುನಿಯಪ್ಪ, ಜೆ.ನಿತ್ಯಾನಂದ ಸೇರಿ ನಾಲ್ವರು.
ಎಸ್‌ಸಿಆರ್‌ಬಿ, ಎಡಿಜಿಪಿ ಡಾ.ಪಿ.ರವೀಂದ್ರನಾಥ್, ಆರ್ಡರ್ಲಿಗಳು: ಶ್ರೀರಾಮುಲು, ರಾಜಶೇಖರ್
ಗೃಹರಕ್ಷಕ ಡಿಜಿಪಿ ಎಂ.ಎನ್.ರೆಡ್ಡಿ, ಆರ್ಡರ್ಲಿಗಳು: ರವಿಕುಮಾರ್ ಸೇರಿ ಇಬ್ಬರು
ಸಿಒಡಿ ಎಡಿಜಿಪಿ, ಪ್ರತಾಪರೆಡ್ಡಿ, ಆರ್ಡರ್ಲಿಗಳು: ಶ್ರೀನಿವಾಸ್, ಎಸ್.ಮಂಜುನಾಥ್ ಸೇರಿ ಮೂವರು.
*ಮಂಗಳೂರು ರೇಂಜ್ ಐಜಿಪಿ, ಹರಿಶೇಖರನ್: ಇಬ್ಬರು ಆರ್ಡರ್ಲಿಗಳು.







