ರಾಜಕೀಯದಿಂದ ಹಿಂದೂಗಳು ಮುಸ್ಲಿಮರನ್ನು ಶತ್ರುಗಳಂತೆ ಕಾಣುವ ಪರಿಸ್ಥಿತಿ: ಶಿರೂರು ಶ್ರೀ

ಉಡುಪಿ, ಜೂ.27: ಉಡುಪಿ ಶ್ರೀಕೃಷ್ಣ ಮಠಕ್ಕೂ ಮುಸ್ಲಿಮರಿಗೂ ಅವಿನಾಭವ ಸಂಬಂಧ ಇದೆ. ಹಿಂದೆ ಹಾಜಿ ಅಬ್ದುಲ್ಲಾರು ಮಠಕ್ಕೆ ಅಗತ್ಯವಾಗಿ ಬೇಕಾಗಿದ್ದ ಅಕ್ಕಿ, ದೀಪದ ಎಣ್ಣೆಯನ್ನು ವಿತರಿಸುತ್ತಿದ್ದರು. ಆದರೆ ಇಂದು ರಾಜಕೀಯವು ಎಲ್ಲ ಧರ್ಮದವರನ್ನು ವಿಂಗಡಿಸಿ ಸೌಹಾರ್ದತೆಯನ್ನು ಹಾಳು ಮಾಡಿದೆ. ಹಿಂದೂಗಳು ಮುಸ್ಲಿಮರನ್ನು ಶತ್ರುಗಳ ರೀತಿಯಲ್ಲಿ ನೋಡುವ ವಾತಾವರಣ ಉಂಟಾಗಿದೆ ಎಂದು ಶಿರೂರು ಮಠಾಧೀಶ ಶ್ರೀಲಕ್ಷ್ಮಿವರತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ ಶೋಕಮಾತ ಇಗರ್ಜಿ, ಸೌಹಾರ್ದ ಸಮಿತಿ, ಕೆಥೋಲಿಕ್ ಸಭಾ ಉಡುಪಿ ಘಟಕ ಹಾಗೂ ಲಯನ್ಸ್ ಕ್ಲಬ್ ಉಡುಪಿ ಸಂಗಮದ ಸಹಯೋಗ ದೊಂದಿಗೆ ಇಗರ್ಜಿಯ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾದ ಸರ್ವಧರ್ಮ ಈದ್ ಆಚರಣೆಯಲ್ಲಿ ಅವರು ಮಾತನಾಡುತಿದ್ದರು.
ಹಿಂದೂಗಳು ದೇವರಂತೆ ಪೂಜಿಸುವ ಗೋವನ್ನು ಪ್ರೀತಿಸಿ ಗೌರವಿಸುವ ತೀರ್ಮಾನವನ್ನು ಉಡುಪಿಯ ಮುಸ್ಲಿಮರು ತೆಗೆದುಕೊಳ್ಳಬೇಕು. ಆ ಮೂಲಕ ಉಡುಪಿ ಜಿಲ್ಲೆ ಇಡೀ ದೇಶಕ್ಕೆ ಮಾದರಿಯಾಗಬೇಕು ಎಂದವರು ಹೇಳಿದರು.
ಉಡುಪಿ ಜಿಲ್ಲಾ ವಕ್ಫ್ ಮಂಡಳಿಯ ಉಪಾಧ್ಯಕ್ಷ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಮಾತನಾಡಿ, ಬಡವರನ್ನು ಕಡೆಗಣಿಸಿ ಹಬ್ಬ ಆಚರಿಸುವುದನ್ನು ದೇವರು ಸಮ್ಮತಿಸುವುದಿಲ್ಲ. ಬಡವರ ಕಷ್ಟವನ್ನು ಅರಿತು ಈದ್ ದಿನ ಅವರಿಗೆ ಆಹಾರ ಧಾನ್ಯಗಳನ್ನು ನೀಡುವುದು ಪುಣ್ಯದ ಕೆಲಸ. ದೇಶದಲ್ಲಿ ಶಾಂತಿ ಸೌಹಾರ್ದತೆ ಯಿಂದ ಎಲ್ಲ ಧರ್ಮೀಯರು ಬದುಕು ನಡೆಸಬೇಕು ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ.ಡಾ. ಜೆರಾಲ್ಡ್ ಐಸಾಕ್ ಲೋಬೊ ವಹಿಸಿದ್ದರು. ಮಂಗಳೂರು ಸೈಂಟ್ ಪೌಲ್ ಸಿಎಸ್‌ಐ ದೇವಾಲಯದ ಪಾಸ್ಟರ್ ರೆ.ನೊಯೆಲ್ ಪ್ರಶಾಂತ್ ಕರ್ಕಡ ಶುಭಾ ಶಂಸನೆಗೈದರು. ಇಗರ್ಜಿಯ ಪ್ರಧಾನ ಧರ್ಮಗುರು ರೆ.ಫಾ.ವಲೇರಿಯನ್ ಮೆಂಡೋನ್ಸ ಸ್ವಾಗತಿಸಿದರು. ಲೆಸ್ಲಿ ಕರ್ನೆಲಿಯೋ ವಂದಿಸಿದರು. ಮೈಕಲ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.







