ಕಾನೂನಿನ ತೀರ್ಮಾನದಂತೆ ರಾಮಮಂದಿರ ನಿರ್ಮಾಣ: ಪೇಜಾವರ ಶ್ರೀ
"ಈ ವಿಚಾರದಲ್ಲಿ ಸಾಕ್ಷಿ ಮಹಾರಾಜ್ ಒಬ್ಬರೇ ನಿರ್ಣಯ ಕೊಡಲು ಸಾಧ್ಯವಿಲ್ಲ"

ಉಡುಪಿ, ಜೂ.27: ರಾಮ ಮಂದಿರ ನಿರ್ಮಾಣಕ್ಕೆ ನವೆಂಬರ್‌ನಲ್ಲಿ ಉಡುಪಿಯಿಂದ ಚಾಲನೆ ನೀಡುವ ಕುರಿತಂತೆ ಸಂಸದ ಸಾಕ್ಷಿ ಮಹಾರಾಜ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ, ಈ ವಿಚಾರದಲ್ಲಿ ಅವರು ಒಬ್ಬರೇ ನಿರ್ಣಯ ಕೊಡುವವರಲ್ಲ. ಮೊದಲು ಸಮಿತಿ, ಸಂವಿಧಾನ, ಕಾನೂನು, ರಾಜ್ಯಸಭೆ, ಲೋಕಸಭೆಯಲ್ಲಿ ತೀರ್ಮಾನ ಆಗಬೇಕು ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಸಾಕ್ಷಿ ಮಹಾರಾಜರು ಕೃಷ್ಣಮಠಕ್ಕೆ ಬಂದು ಹೋಗಿದ್ದಾರೆ. ಅವರು ರಾಮ ಮಂದಿರ ನಿರ್ಮಾಣದ ವಿಚಾರ ಕುರಿತು ನನ್ನ ಜೊತೆ ಮಾತನಾಡಿ ದ್ದರು. ಆದರೆ ಅವರು ಹಿಂದಿಯಲ್ಲಿ ಮಾತನಾಡಿದ್ದರಿಂದ ಸ್ಪಷ್ಟವಾಗಿ ಅರ್ಥ ಆಗಲಿಲ್ಲ. ನಮ್ಮ ಮೂರನೇ ಪರ್ಯಾಯದ ಸಂದರ್ಭ ಉಡುಪಿಯಲ್ಲಿ ಧಾರ್ಮಿಕ ಸಂಸತ್ತು ನಡೆದಿತ್ತು. ಅದರಲ್ಲಿ ರಾಮ ಮಂದಿರದ ಕೀಲಿ ಕೈ ಒಡೆದು ಪ್ರವೇಶಿಸುವ ನಿರ್ಧಾರ ಮಾಡಲಾಗಿತ್ತು. ಆದರೆ ರಾಜೀವ್‌ಗಾಂಧಿ ಮಂದಿರದ ಬೀಗ ತೆಗೆಸಿದ್ದರು. ಅಂದು ಎಲ್ಲರೂ ದರ್ಶನ ಮಾಡಿದ್ದರು ಎಂದು ಪೇಜಾವರ ಶ್ರೀ ನೆನಪಿಸಿಕೊಂಡರು. ನವೆಂಬರ್ ತಿಂಗಳಲ್ಲಿ ಉಡುಪಿಯಲ್ಲಿ ವಿಶ್ವ ಸಂತ ಸಮ್ಮೇಳನ ನಡೆಸುವ ಅಪೇಕ್ಷೆಯಿದೆ. ಇದರಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ಚರ್ಚೆಯಾಗಬಹುದು. ಇದರಲ್ಲಿಯೇ ರಾಮಮಂದಿರಕ್ಕೆ ಮಹೂರ್ತ ಆಗಬಹುದು ಎಂದು ಮಹಾರಾಜ್ ಹೇಳಿರಬಹುದು. ಯಾವುದೂ ಸ್ಪಷ್ಟವಾಗದೆ ನಾನು ಈ ಬಗ್ಗೆ ಈಗ ಏನನ್ನೂ ಹೇಳಲಾರೆ ಎಂದು ಅವರು ತಿಳಿಸಿದರು.





