ನಿಮ್ಮ ನೆಲವನ್ನು ಬಳಸಲು ಭಯೋತ್ಪಾದಕರಿಗೆ ಅವಕಾಶ ನೀಡಬೇಡಿ
ಪಾಕಿಸ್ತಾನಕ್ಕೆ ಭಾರತ,ಅಮೆರಿಕದ ಕಿವಿಮಾತು

ವಾಷಿಂಗ್ಟನ್,ಜೂ.27: ಪಾಕಿಸ್ತಾನಕ್ಕೆ ಕಠಿಣ ಸಂದೇಶವೊಂದನ್ನು ರವಾನಿಸಿರುವ ಭಾರತ ಮತ್ತು ಅಮೆರಿಕ, ಇತರ ರಾಷ್ಟ್ರಗಳ ಮೇಲೆ ಭಯೋತ್ಪಾದಕ ದಾಳಿಗಳನ್ನು ನಡೆಸಲು ತನ್ನ ನೆಲದ ಬಳಕೆಯಾಗದಂತೆ ನೋಡಿಕೊಳ್ಳುವಂತೆ ಆ ರಾಷ್ಟ್ರಕ್ಕೆ ಸೂಚಿಸಿವೆ. ಜೊತೆಗೆ ಮುಂಬೈ ಮತ್ತು ಭಾರತದ ಇತರ ಭಾಗಗಳಲ್ಲಿನ ಭಯೋತ್ಪಾದಕ ದಾಳಿಗಳ ರೂವಾರಿಗಳನ್ನು ಕಾನೂನಿನ ಶಿಕ್ಷೆಗೊಳಪಡಿಸುವಂತೆ ಅದಕ್ಕೆ ತಾಕೀತು ಮಾಡಿವೆ.
ಭೀತಿವಾದವು ಜಾಗತಿಕ ಪಿಡುಗಾಗಿದ್ದು, ಅದರ ವಿರುದ್ಧ ಹೋರಾಟ ಅತ್ಯಗತ್ಯವಾಗಿದೆ ಮತ್ತು ವಿಶ್ವದ ಎಲ್ಲೆಡೆ ಭಯೋತ್ಪಾದಕರ ಸುರಕ್ಷಿತ ನೆಲೆಗಳನ್ನು ಬೇರುಸಹಿತ ನಾಶಗೊಳಿಸ ಬೇಕಿದೆ ಎಂದು ಸೋಮವಾರ ರಾತ್ರಿ ಇಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಮಾತುಕತೆಯ ಬಳಿಕ ಹೊರಡಿಸಲಾದ ಜಂಟಿ ಹೇಳಿಕೆಯು ಒತ್ತಿ ಹೇಳಿದೆ.
ಮಾನವತೆಗೆ ಎದುರಾಗಿರುವ ಈ ಗಂಭೀರ ಸವಾಲಿನ ವಿರುದ್ಧ ಭಾರತ ಮತ್ತು ಅಮೆರಿಕ ಜಂಟಿಯಾಗಿ ಹೋರಾಟ ನಡೆಸಲಿವೆ ಎಂದು ಹೇಳಿಕೆಯು ತಿಳಿಸಿದೆ.
ಮುಂಬೈ(2008) ಮತ್ತು ಪಠಾಣಕೋಟ್(2016) ಭಯೋತ್ಪಾದಕ ದಾಳಿಗಳನ್ನು ನಿರ್ದಿಷ್ಟವಾಗಿ ಪ್ರಸ್ತಾಪಿಸಿರುವ ಹೇಳಿಕೆಯು, ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳು ಈ ದಾಳಿಗಳ ರೂವಾರಿಗಳಾಗಿದ್ದು, ಭಯೋತ್ಪಾದಕರನ್ನು ತ್ವರಿತವಾಗಿ ಕಾನೂನಿನ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದೆ.
ಅಲ್ ಕಾಯದಾ, ಐಸಿಸ್, ಜೈಷ್-ಎ-ಮುಹಮ್ಮದ್, ಲಷ್ಕರ್-ಎ-ತೈಬಾ, ಡಿ-ಕಂಪನಿ ಮತ್ತು ಅವುಗಳೊಂದಿಗೆ ಗುರುತಿಸಿಕೊಂಡಿರುವ ಗುಂಪುಗಳಿಂದ ಭಯೋತ್ಪಾದಕ ಬೆದರಿಕೆಗಳ ವಿರುದ್ಧ ಸಹಕಾರವನ್ನು ಇನ್ನಷ್ಟು ಬಲಗೊಳಿಸಲು ಉಭಯ ರಾಷ್ಟ್ರಗಳು ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿವೆ.
ಸೋಮವಾರ ಮೋದಿ-ಟ್ರಂಪ್ ಭೇಟಿಗೆ ಕೆಲವೇ ಕ್ಷಣಗಳ ಮುನ್ನ ಪಾಕಿಸ್ತಾನದ ಹಿಝ್ಬುಲ್ ಮುಜಾಹಿದೀನ್ ನಾಯಕ ಸೈಯದ್ ಸಲಾಹುದ್ದೀನ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವ ಅಮೆರಿಕದ ನಿರ್ಧಾರವನ್ನು ಪ್ರಶಂಸಿಸಿರುವ ಭಾರತವು, ಇದು ಭಯೋತ್ಪಾದನೆಯನ್ನು ಅದರ ಎಲ್ಲ ರೂಪಗಳಲ್ಲಿ ಅಂತ್ಯಗೊಳಿಸುವ ಅಮೆರಿಕದ ಬದ್ಧತೆಗೆ ನಿದರ್ಶನವಾಗಿದೆ ಎಂದು ಹೇಳಿದೆ.
ತಮ್ಮ ನಿಯೋಗ ಮಟ್ಟದ ಮಾತುಕತೆಗಳ ಬಳಿಕ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಮೋದಿ ಮತ್ತು ಟ್ರಂಪ್ ಭೀತಿವಾದದ ವಿರುದ್ಧ ಹೋರಾಡುವ ತಮ್ಮ ಬದ್ಧತೆಯ ಬಗ್ಗೆ ಮಾತನಾಡಿದರು.
ಭಯೋತ್ಪಾದನೆಯ ವಿರುದ್ಧ ಹೋರಾಟ ಮತ್ತು ಭಯೋತ್ಪಾದಕರ ಅಡಗುದಾಣಗಳ ವಿನಾಶ ಪರಸ್ಪರ ಸಹಕಾರದ ಮಹತ್ವದ ಭಾಗವಾಗಿರಲಿದೆ ಎಂದು ಹೇಳಿದ ಮೋದಿ, ಭಯೋತ್ಪಾದನೆ ಕುರಿತು ನಮ್ಮ ಸಾಮಾನ್ಯ ಕಳವಳಗಳ ನಿವಾರಣೆಗೆ ಸಹಕಾರವನ್ನು ಬಲಗೊಳಿಸಲು ಗುಪ್ತಚರ ಮಾಹಿತಿಗಳ ವಿನಿಮಯವನ್ನು ಹೆಚ್ಚಿಸಲಿದ್ದೇವೆ ಮತ್ತು ಇದಕ್ಕನುಗುಣವಾಗಿ ನಮ್ಮ ನೀತಿ ಸಮನ್ವಯವನ್ನು ಇನ್ನಷ್ಟು ಗಾಢಗೊಳಿಸಲಿದ್ದೇವೆ ಎಂದರು.
ಭಯೋತ್ಪಾದನೆಯಿಂದಾಗಿ ಅಫಘಾನಿಸ್ತಾನದಲ್ಲಿ ಹೆಚ್ಚುತ್ತಿರುವ ಅಸ್ಥಿರತೆಯಿಂದಾಗಿ ಭಾರತ ಮತ್ತು ಅಮೆರಿಕ ಕಳವಳಗೊಂಡಿದ್ದು, ಅಲ್ಲಿ ಶಾಂತಿ ನೆಲೆಗೊಳ್ಳುವಂತೆ ಮಾಡಲು ಉಭಯ ರಾಷ್ಟ್ರಗಳು ನಿಕಟ ಸಮಾಲೋಚನೆ, ಸಂವಹನ ಮತ್ತು ಸಮನ್ವಯಗಳನ್ನು ಕಾಯ್ದುಕೊಳ್ಳಲಿವೆ ಎಂದರು.
ಭಾರತ ಮತ್ತು ಅಮೆರಿಕ ಭಯೋತ್ಪಾದನೆ ಸಮಸ್ಯೆಯ ಸುಳಿಗೆ ಸಿಲುಕಿವೆ ಎಂದ ಟ್ರಂಪ್, ಭಯೋತ್ಪಾದಕ ಸಂಘಟನೆಗಳು ಮತ್ತು ಅವುಗಳಿಗೆ ಸ್ಫೂರ್ತಿಯಾಗಿರುವ ಮೂಲಭೂತವಾದಿ ಸಿದ್ಧಾಂತವನ್ನು ನಾಶಗೊಳಿಸಲು ಉಭಯ ರಾಷ್ಟ್ರಗಳು ದೃಢನಿಶ್ಚಯ ಮಾಡಿವೆ. ಮೂಲಭೂತವಾದಿ ಇಸ್ಲಾಮಿಕ್ ಭೀತಿವಾದವನ್ನು ನಾವು ಮಟ್ಟಹಾಕುತ್ತೇವೆ ಎಂದರು.
ನಮ್ಮ ಸೇನೆಗಳು ಪರಸ್ಪರ ಸಹಕಾರವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿ ದಿನ ಶ್ರಮಿಸುತ್ತಿವೆ. ಮುಂದಿನ ತಿಂಗಳು ನಡೆಯಲಿರುವ, ಹಿಂದು ಮಹಾಸಾಗರದಲ್ಲಿ ಈ ವರೆಗಿನ ಬೃಹತ್ ಸಮುದ್ರ ಯುದ್ಧಾಭ್ಯಾಸದಲ್ಲಿ ಅವು ಜಪಾನ್ ನೌಕಾಪಡೆಯೊಂದಿಗೆ ಸೇರಲಿವೆ ಎಂದರು.
ಭಯೋತ್ಪಾದಕರು ಪ್ರವಾಸಗಳನ್ನು ಮಾಡುವುದನ್ನು ತಡೆಯಲು ಮತ್ತು ವಿಶ್ವಾದ್ಯಂತ ಭಯೋತ್ಪಾದಕರ ಭರ್ತಿ ಕಾರ್ಯಗಳನ್ನು ವಿಫಲಗೊಳಿಸಲು ಪರಸ್ಪರ ಸಹಕಾರವನ್ನು ಹೆಚ್ಚಿಸಲಾಗುವುದು ಎಂದೂ ಜಂಟಿ ಹೇಳಿಕೆಯು ಪ್ರಕಟಿಸಿದೆ.







