ಜು. 3ರಂದು ಡಿವೈಎಫ್‌ಐ ಧರಣಿ
ಪಂಜಿ ಮೊಗರು ಜೋಡಿ ಕೊಲೆ ಪ್ರಕರಣ
ಮಂಗಳೂರು, ಜೂ. 27: ಪಂಜಿ ಮೊಗರುವಿನಲ್ಲಿ ತಾಯಿ ಮತ್ತು ಮಗಳು ಇಬ್ಬರು ಕೊಲೆಯಾಗಿ ಇದೇ ಜೂನ್ 28ಕ್ಕೆ ಆರು ವರ್ಷ ಪೂರ್ಣಗೊಳ್ಳುತ್ತಿದೆ. ಈ ಪ್ರಕರಣವನ್ನು ಸಿಐಡಿಗೆ ವಹಿಸಿದ್ದರೂ ಪ್ರಕರಣವನ್ನು ಭೇದಿಸುವಲ್ಲಿ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ವಿಚಾರಣೆಗೆ ವಿಶೇಷ ತನಿಖಾ ತಂಡವನ್ನು ರಚಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಜು. 3ರಂದು ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಮಂಗಳೂರು ತಾಲೂಕಿನ ಪಂಜಿ ಮೊಗರು ಪ್ರಕರಣದಲ್ಲಿ ತಾಯಿ -ಮಗಳು ಇಬ್ಬರನ್ನು ಬರ್ಬರವಾಗಿ ಕೊಲೆ ಮಾಡಲಾದ ಪ್ರಕರಣವನ್ನು ಸಿಐಡಿಗೆ ವಹಿಸಿದ್ದರೂ ಆರೋಪಿಗಳ ಪತ್ತೆಯಾಗದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಸರಕಾರ ಸಿಐಡಿಯಿಂದ ವಾಪಾಸು ಪಡೆಯಬೇಕು ಮತ್ತು ಪ್ರಕರಣವನ್ನು ಭೇದಿಸಲು ವಿಶೇಷ ಪರಿಣತಿ ಹೊಂದಿದ ತಂಡವನ್ನು ರಚಿಸಬೇಕು ಎಂದು ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.
ಕೊಲೆ ನಡೆದ ನಂತರ ಆರೋಪಿಗಳ ಪತ್ತೆಯಾಗದ ಹಿನ್ನೆಲೆಯಲ್ಲಿ ಡಿವೈಎಫ್‌ಐ ನೇತೃತ್ವದಲ್ಲಿ ಕಮೀಷನರ್ ಕಚೇರಿಗೆ ಪಾದಯಾತ್ರೆ ನಡೆಸಿ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಆಗ್ರಹಿಸಿತ್ತು. ಬಳಿಕ ಹಲವು ಪ್ರತಿಭಟನೆಗಳು,ಪ್ರದರ್ಶನಗಳ ಬಳಿಕ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ನೇತೃತ್ವದ ಸರಕಾರ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ಬಳಿಕ ವಿಧಾನ ಸಭೆ ಚುನಾವಣೆ ನಡೆದು ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಸರಕಾರ ಸಿಐಡಿಯ ಅಧಿಕಾರಿಯನ್ನು ಮಾತ್ರ ಬದಲಾಯಿಸಿದೆ ಹೊರತು ಹೆಚ್ಚಿನ ಬದಲಾವಣೆ ಏನು ನಡೆದಿಲ್ಲ. ಪ್ರಕರಣವನ್ನು ಸಿಬಿಐಗೂ ಒಪ್ಪಿಸಲಿಲ್ಲ ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
ಪಂಜಿ ಮೊಗರು ಪ್ರಕರಣದ ಆರೋಪಿಗಳ ಪತ್ತೆಗೆ ಸ್ಥಳೀಯ ಶಾಸಕ ಮೊದಿನ್ ಬಾವ ಹೆಚ್ಚಿನ ಮುತುವರ್ಜಿ ವಹಿಸಿಬೇಕು.ಈ ಕ್ಷೇತ್ರದಲ್ಲಿ ಶಾಸಕರಾಗುವ ಮೊದಲು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಹಿಂದಿನ ಶಾಸಕರು ಪ್ರಕರಣವನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿರುವ ಈಗಿನ ಶಾಸಕರು ಪ್ರಕರಣದ ಆರೋಪಿಗಳ ಪತ್ತೆಗೆ ಮುತುವರ್ಜಿ ವಹಿಸಬೇಕಾಗಿತ್ತು .ಈ ಬಗ್ಗೆ ಯಾವೂದೇ ಆಸಕ್ತಿ ವಹಿಸದೆ ಇದ್ದರೆ ಶಾಸಕರ ವಿರುದ್ದವೂ ಪ್ರತಿಭಟನೆ ನಡೆಸಲಾಗುವುದು ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
‘ಕಾಣದ ಕೈಗಳ’ ಬಗ್ಗೆ ಮಂಪರು ಪರೀಕ್ಷೆ ನಡೆದಿಲ್ಲ:- ಪ್ರಕರಣದಲ್ಲಿ ‘ಕಾಣದ ಕೈಗಳ ’ಪಾತ್ರವಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಕುಟುಂಬದ ಸದಸ್ಯರನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಸಿಐಡಿ ನ್ಯಾಯಾಲಯದ ಅನುಮತಿ ಪಡೆದಿದ್ದರೂ ಇದುವರೆಗೂ ಮಂಪರು ಪರೀಕ್ಷೆಗೆ ಒಳಪಡಿಸಿಲ್ಲ ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
‘‘ಪಂಜಿ ಮೊಗರು ಪ್ರಕರಣದಲ್ಲಿ ನನ್ನ ಸಹೋದರಿ ಮೃತ ಪಟ್ಟಿದ್ದು ,ಆರು ವರ್ಷ ವಾಗುತ್ತಾ ಬಂದರೂ ಆರೋಪಿಗಳ ಪತ್ತೆಯಾಗಿಲ್ಲ. ಪ್ರಕರಣದ ತನಿಖೆಗೆ ಬರುವ ಅಧಿಕಾರಿಗಳು ನಮ್ಮನ್ನು ಬೆಂಗಳೂರಿಗೆ ಕರೆದು ಕೇಳಿದ ಪ್ರಶ್ನೆಗಳನ್ನೇ ಕೇಳುತ್ತಾರೆ ಹೊರತು ಬೇರೇನೂ ನಡೆದಿಲ್ಲ. ಕುಟುಂಬದ ಸದಸ್ಯರ ಮಂಪರು ಪರೀಕ್ಷೆಯೂ ಮಹಿಳೆಯರೂ ಸೇರಿದಂತೆ ಎಲ್ಲರನ್ನೂ ಸೇರಿ ನಡೆಸಬೇಕಾಗಿತ್ತು ಅದೂ ನಡೆದಿಲ್ಲ. ಇದರಿಂದ ನಮಗೆ ನ್ಯಾಯ ದೊರೆತಿಲ್ಲ’’ ಎಂದು ಮೃತ ಮಹಿಳೆ ರಝೀಯಾರವರ ಸಹೋದರ ಮುಹಮ್ಮದ್ ಹನೀಫ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೊಷ್ ಬಜಾಲ್, ಜಿಲ್ಲಾ ಉಪಾಧ್ಯಕ್ಷ ಬಿ.ಕೆ.ಇಮ್ತಿಯಾಜ್ ಹಾಗೂ ಮುಹಮ್ಮದ್ ಹನೀಫ್ ಮೊದಲಾದವರು ಉಪಸ್ಥಿತರಿದ್ದರು.







