ಅಶ್ರಫ್ ಕಲಾಯಿ ಕೊಲೆ ಪ್ರಕರಣ: ಮತ್ತೋರ್ವನ ಬಂಧನ
ಮಂಗಳೂರು, ಜೂ. 27: ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಕಲಾಯಿ ನಿವಾಸಿ ಎಸ್‌ಡಿಪಿಐ ಕಾರ್ಯಕರ್ತ ಮುಹಮ್ಮದ್ ಅಶ್ರಫ್ ಕೊಲೆ ಪ್ರಕರಣದಲ್ಲಿ ಸಾಕ್ಷ ನಾಶಕ್ಕೆ ಯತ್ನಿಸಿದ ಆರೋಪದ ಮೇಲೆ ಬಂಟ್ವಾಳ ನಿವಾಸಿ ರಿತೇಶ್ ಎಂಬಾತನನ್ನು ವಿಶೇಷ ತನಿಖಾ ತಂಡದ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಜೂನ್ 21ರಂದು ಬೆಂಜನಪದವು ಬಳಿ ಅಶ್ರಫ್ ಎಂಬವರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಕೊಲೆಯ ಸಂಚು ನಡೆಸಿದವರಲ್ಲಿ ಒಬ್ಬನಾದ ದಿವ್ಯರಾಜ್ ಶೆಟ್ಟಿ ಸೇರಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದರು.
ಆರೋಪಿಗಳು ತಲೆಮರೆಸಿಕೊಳ್ಳಲು ನೆರವು ನೀಡಿದ ಮತ್ತು ಸಾಕ್ಷ ನಾಶಕ್ಕೆ ಯತ್ನಿಸಿದ್ದ ಆರೋಪದ ಮೇಲೆ ಇಬ್ಬರನ್ನು ವಶಕ್ಕೆ ಪಡೆಯಲಾಗಿತ್ತು. ಈ ಪೈಕಿ ರಿತೇಶ್‌ನನ್ನು ಮಂಗಳವಾರ ಬಂಧಿಸಲಾಗಿದೆ. ಈತ ಕೊಲೆ ಮಾಡಿದ ಆರೋಪಿಗಳ ಸ್ನೇಹಿತನಾಗಿದ್ದು, ಸಾಕ್ಷ ನಾಶಕ್ಕೆ ಸಹಕಾರ ನೀಡಿದ್ದ ಎಂದು ದಕ್ಷಿಣ ಕನ್ನಡ ಎಸ್‌ಪಿ ಸಿ.ಎಚ್.ಸುಧೀರ್ ಕುಮಾರ್ ರೆಡ್ಡಿ ತಿಳಿಸಿದರು.
ಕೊಲೆಗೆ ಸಂಚು ರೂಪಿಸಿದ ಮತ್ತೋರ್ವ ಪ್ರಮುಖ ಆರೋಪಿ ಭರತ್ ಸೇರಿದಂತೆ ಇನ್ನೂ ಕೆಲವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.





