ಡಿವೈ ಪಾಟೀಲ್ ಸ್ಟೇಡಿಯಂ ಫಿಫಾ ವಿಶ್ವಕಪ್‌ಗೆ ಸಜ್ಜಾಗಿದೆ: ಸೆಪ್ಪಿ

ಮುಂಬೈ, ಜೂ.27: ಫಿಫಾ ಅಂಡರ್-17 ವಿಶ್ವಕಪ್‌ಗೆ ಆತಿಥ್ಯವಹಿಸಿರುವ ದೇಶದ ಆರು ಸ್ಟೇಡಿಯಂಗಳ ಪೈಕಿ ಒಂದಾಗಿರುವ ನವಿ ಮುಂಬೈನಲ್ಲಿರುವ ಡಿ.ವೈ. ಪಾಟೀಲ್ ಸ್ಪೋರ್ಟ್ಸ್ ಸ್ಟೇಡಿಯಂ ಸಂಪೂರ್ಣ ಸಜ್ಜಾಗಿದೆ ಎಂದು ಸ್ಥಳೀಯ ಆಯೋಜನಾ ಸಮಿತಿಯ ಟೂರ್ನಮೆಂಟ್‌ನ ನಿರ್ದೇಶಕ ಜೇವಿಯರ್ ಸೆಪ್ಪಿ ಹೇಳಿದ್ದಾರೆ.
ನವಿ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್‌ಗೆ ಸೇರಿರುವ ನಾಲ್ಕನೆ ಹಾಗೂ ಕೊನೆಯ ತರಬೇತಿ ಪಿಚ್‌ಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಪಂದ್ಯಕ್ಕೆ ಸ್ಟೇಡಿಯಂ ಬಹುತೇಕ ಸಜ್ಜಾಗಿದೆ. ನಿರ್ದಿಷ್ಟ ನವೀಕರಣ ಕಾರ್ಯ ನಡೆಸಿದ್ದರಿಂದ ವ್ಯವಸ್ಥೆಗಳು ಮತ್ತಷ್ಟು ಉತ್ತಮವಾಗಿದೆ. ಟೂರ್ನಮೆಂಟ್‌ಗೆ ಫುಟ್ಬಾಲ್ ಅಭಿಮಾನಿಗಳು ಕುತೂಹಲಭರಿತರಾಗಿದ್ದು, ಟಿಕೆಟ್‌ಗಳ ಮಾರಾಟದಲ್ಲಿ ಗಣನೀಯ ಏರಿಕೆಯಾಗುತ್ತಿದೆ. ಜೀವನದಲ್ಲಿ ಒಮ್ಮೆ ಮಾತ್ರ ಲಭಿಸಿರುವ ಈ ಅವಕಾಶವನ್ನು ಅಭಿಮಾನಿಗಳು ತಪ್ಪಿಸಿಕೊಳ್ಳಲು ಸಿದ್ಧರಿಲ್ಲ ಎಂದು ಸೆಪ್ಪಿ ಹೇಳಿದ್ದಾರೆ.
ಭಾರತದಲ್ಲಿ ಮೊತ್ತ ಮೊದಲ ಬಾರಿ ನಡೆಯಲಿರುವ ಫಿಫಾ ಟೂರ್ನಮೆಂಟ್‌ನ ಉದ್ಘಾಟನಾ ಪಂದ್ಯ, ಒಂದು ಸೆಮಿಫೈನಲ್ ಪಂದ್ಯಕ್ಕೆ ಡಿವೈ ಪಾಟೀಲ್ ಸ್ಟೇಡಿಯಂ ಆತಿಥ್ಯವಹಿಸಿಕೊಂಡಿದೆ. 2016ರಲ್ಲಿ ಫಿಫಾ ಈ ತಾಣವನ್ನು ವಿಶ್ವಕಪ್‌ಗೆ ಮಾನ್ಯ ಮಾಡಿದೆ.
ವಿಶ್ವಕಪ್ ಟೂರ್ನಿಯು ಅಕ್ಟೋಬರ್ 6ರಿಂದ 28ರ ತನಕ ಹೊಸದಿಲ್ಲಿ, ಕೊಚ್ಚಿ, ಗುವಾಹಟಿ ಹಾಗೂ ಗೋವಾದಲ್ಲಿ ನಡೆಯಲಿದೆ.
ಕೊಚ್ಚಿ ಸ್ಟೇಡಿಯಂ ಬಗ್ಗೆ ಫಿಫಾ ತೃಪ್ತಿ:
ಕೊಚ್ಚಿ, ಜೂ.27: ಕೇರಳದ ಕೊಚ್ಚಿಯಲ್ಲಿರುವ ಜವಾಹರ್‌ಲಾಲ್ ನೆಹರೂ ಅಂತಾರಾಷ್ಟ್ರೀಯ ಸ್ಟೇಡಿಯಂ ಹಾಗೂ ನಾಲ್ಕು ತರಬೇತಿ ಮೈದಾನಗಳ ಕಾಮಗಾರಿಯ ಪ್ರಗತಿಯ ಬಗ್ಗೆ ಫಿಫಾ ಅಧಿಕಾರಿಗಳು ಮಂಗಳವಾರ ಸಂಪೂರ್ಣ ತೃಪ್ತಿವ್ಯಕ್ತಪಡಿಸಿದ್ದಾರೆ.
ಮಾರ್ಚ್‌ನಲ್ಲಿ ಕಾಮಗಾರಿ ವಿಳಂಬದಿಂದಾಗಿ ಆತಂಕ ಮೂಡಿಸಿದ್ದ ಕೊಚ್ಚಿ ಸ್ಟೇಡಿಯಂ ಇದೀಗ ವೇಗವಾಗಿ ನವೀಕರಣಗೊಂಡಿದೆ ಎಂದು ಸ್ಥಳೀಯ ಆಯೋಜನಾ ಸಮಿತಿಯ ಟೂರ್ನಮೆಂಟ್ ಡೈರೆಕ್ಟರ್ ಸೆಪ್ಪಿ ತಿಳಿಸಿದ್ದಾರೆ.
ಈ ಹಿಂದೆ ಜವಾಹರ್‌ಲಾಲ್ ನೆಹರೂ ಇಂಟರ್‌ನ್ಯಾಶನಲ್ ಸ್ಟೇಡಿಯಂ ಪ್ರತಿಷ್ಠಿತ ಫಿಫಾ ಅಂಡರ್-17 ವಿಶ್ವಕಪ್ ಆಯೋಜನೆಗೆ ಅನರ್ಹವಾಗಿದೆ ಎಂದು ಹೇಳಲಾಗಿತ್ತು.
60,000 ಪ್ರೇಕ್ಷಕರ ಸಾಮಥ್ಯವಿರುವ ಸ್ಟೇಡಿಯಂನಲ್ಲಿ ಪ್ರೇಕ್ಷಕರ ಸುರಕ್ಷತೆ ಹಾಗೂ ಭದ್ರತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಗರಿಷ್ಠ 41,748 ಪ್ರೇಕ್ಷಕರಿಗೆ ಅವಕಾಶ ನೀಡಲಾಗುತ್ತಿದೆ.







