ಪ್ರಕರಣದಿಂದ ನಿಕಂ ಹಿಂದೆ ಸರಿದರೂ ನ್ಯಾಯದ ಭರವಸೆ ಬಿಡದ ಮೊಹ್ಸಿನ್ ಶೇಖ್ ಕುಟುಂಬ

ಮೊಹ್ಸಿನ್ರ ಹೆತ್ತವರು
ಹೊಸದಿಲ್ಲಿ,ಜೂ.28: ಬಲಪಂಥೀಯ ಹಿಂದು ರಾಷ್ಟ್ರ ಸೇನಾ(ಎಚ್ಆರ್ಎಸ್)ದ ಸದಸ್ಯರು ಆರೋಪಿಗಳಾಗಿರುವ 2014ರ ಮೊಹ್ಸಿನ್ ಶೇಖ್ ಹತ್ಯೆ ಪ್ರಕರಣದಲ್ಲಿ ವಿಶೇಷ ಸರಕಾರಿ ಅಭಿಯೋಜಕರಾಗಿದ್ದ ಖ್ಯಾತ ವಕೀಲ ಉಜ್ವಲ್ ನಿಕಂ ಅವರು ಇತ್ತೀಚಿಗೆ ತನ್ನ ಜವಾಬ್ದಾರಿಯಿಂದ ಹಿಂದೆ ಸರಿದಿದ್ದಾರಾದರೂ ತಮಗೆ ನ್ಯಾಯ ದೊರೆಯುವ ಭರವಸೆಯನ್ನು ಮೊಹ್ಸಿನ್ ಕುಟುಂಬವು ಕಳೆದುಕೊಂಡಿಲ್ಲ.
ಶಿವಸೇನೆಯ ಸ್ಥಾಪಕ ಬಾಳ್ ಠಾಕ್ರೆ ಮತ್ತು ಮರಾಠಾ ದೊರೆ ಛತ್ರಪತಿ ಶಿವಾಜಿ ಅವರ ಆಕ್ಷೇಪಾರ್ಹ ಚಿತ್ರಗಳ ಪ್ರಸಾರದ ಬಳಿಕ ಪುಣೆಯಲ್ಲಿ ಕೋಮು ಉದ್ವಿಗ್ನತೆ ಭುಗಿಲೆದ್ದಿದ್ದ ಸಂದರ್ಭ 2024,ಜೂ.2ರಂದು ಗುಂಪೊಂದು ಮೊಹ್ಸಿನ್ ಶೇಖ್(24)ರನ್ನು ಹತ್ಯೆಗೈದಿತ್ತು. ಈ ದಾಳಿ ನಡೆದಾಗ ಮೊಹ್ಸಿನ್ ಮಸೀದಿಯಲ್ಲಿ ಸಂಜೆಯ ನಮಾಝ್ ಮುಗಿಸಿ ಮರಳುತ್ತಿದ್ದರು.

(ತನ್ನ ಮಗುವಿನೊಂದಿಗೆ ಮೊಹ್ಸಿನ್)
ನಿಕಂ ಅವರು ಯಾವುದೇ ವಿವರಣೆ ನೀಡದೇ ಪ್ರಕರಣದಿಂದ ಹಿಂದೆ ಸರಿದಿರುವ ಹಿನ್ನೆಲೆಯಲ್ಲಿ ಮೊಹ್ಸಿನ್ ಕುಟುಂಬವು ಇನ್ನೋರ್ವ ಖ್ಯಾತ ನ್ಯಾಯವಾದಿ ರೋಹಿಣಿ ಸಾಲಿಯಾನ್ ಅವರನ್ನು ವಿಶೇಷ ಸರಕಾರಿ ಅಭಿಯೋಜಕರನ್ನಾಗಿ ನೇಮಿಸುವಂತೆ ಕೋರಿ ರಾಜ್ಯ ಸರಕಾರಕ್ಕೆ ಪತ್ರ ಬರೆದಿದೆ.
ಪ್ರಕರಣದಿಂದ ಹಿಂದೆ ಸರಿಯುವ ನಿಕಂ ನಿರ್ಧಾರದಿಂದ ಮೊಹ್ಸಿನ್ ತಂದೆ ಸಾದಿಕ್ ಶೇಖ್(63)ತೀವ್ರ ನಿರಾಶರಾಗಿದ್ದಾರೆ. ಹೊಟ್ಟೆಪಾಡಿಗಾಗಿ ಮಹಾರಾಷ್ಟ್ರದ ಸೋಲಾಪುರ ದಲ್ಲಿ ಪುಟ್ಟ ಝೆರಾಕ್ಸ್ ಮತ್ತು ಡಿಟಿಪಿ ಅಂಗಡಿಯನ್ನು ನಡೆಸುತ್ತಿರುವ ಅವರಿಗೆ ಆರೋಪಿ ಗಳ ವಿರುದ್ಧ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಕೆಯಾಗಲಿರುವ ಈ ನಿರ್ಣಾಯಕ ಕಾಲಘಟ್ಟದಲ್ಲಿ ನಿಕಂ ಈ ದಿಢೀರ್ ನಿರ್ಧಾರ ತೆಗೆದುಕೊಂಡಿದ್ದು ಏಕೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.

( ವಕೀಲ ಉಜ್ವಲ್ ನಿಕಂ )
ನಿಕಂ ಸಾದಿಕ್ರ ಕರೆಗಳನ್ನು ಸ್ವೀಕರಿಸಿಲ್ಲ. ಆದರೆ ಸಾದಿಕ್ರ ಎಸ್ಎಂಎಸ್ಗೆ ಉತ್ತರಿಸಿರುವ ನಿಕಂ,‘‘ನನಗೆ ನಿಮ್ಮ ಬಗ್ಗೆ ಅತ್ಯಂತ ಹೆಚ್ಚಿನ ಗೌರವವಿದೆ ಮತ್ತು ಅದಕ್ಕಾಗಿಯೇ ಪ್ರಕರಣವನ್ನು ವಹಿಸಿಕೊಂಡಿದ್ದೆ. ದೇವರು ದೊಡ್ಡವನು ಮತ್ತು ನಿಮಗೆ ನ್ಯಾಯ ದೊರೆಯುತ್ತದೆ ’’ಎಂದು ಹೇಳಿದ್ದಾರೆ.
2008ರ ಮುಂಬ್ಯೆ ದಾಳಿ ಸೇರಿದಂತೆ ತಾನು ವಾದಿಸಿದ್ದ ಭಯೋತ್ಪಾದನೆ ವಿರುದ್ಧದ ಹೆಚ್ಚಿನ ಪ್ರಕರಣಗಳಲ್ಲಿ ನಿಕಂ ಗೆದ್ದಿರುವುದರಿಂದ ಮೊಹ್ಸಿನ್ ಹತ್ಯೆ ಪ್ರಕರಣದಲ್ಲಿಯೂ ಅವರೇ ವಾದಿಸಬೇಕೆಂದು ಸಾದಿಕ್ ಕುಟುಂಬ ಬಯಸಿತ್ತು.

( ನ್ಯಾಯವಾದಿ ರೋಹಿಣಿ ಸಾಲಿಯಾನ್ )
ಆರೋಪಿಗಳು ಹಲವಾರು ಬಾರಿ ಸಲ್ಲಿಸಿದ್ದ ಜಾಮೀನು ಅರ್ಜಿಗಳು ನ್ಯಾಯಾಲಯ ದಲ್ಲಿ ತಿರಸ್ಕೃತಗೊಳ್ಳುವಂತೆ ನಿಕಂ ಕಾಳಜಿ ವಹಿಸಿದ್ದರು. ಆದರೆ ಈಗ ಐವರನ್ನು ಹೊರತು ಪಡಿಸಿದರೆ ಉಳಿದವರೆಲ್ಲರೂ ಜಾಮೀನಿನಲ್ಲಿ ಹೊರಗಿದ್ದಾರೆ.
ಮೊಹ್ಸಿನ್ ಹತ್ಯೆ ಬಳಿಕ ಆಗಿನ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಮತ್ತು ಉಪ ಮುಖ್ಯಮಂತ್ರಿ ಆರ್.ಆರ್.ಪಾಟೀಲ್ ಅವರು ಸಾದಿಕ್ರನ್ನು ಭೇಟಿಯಾಗಿ ನ್ಯಾಯ ಒದಗಿಸುವ ಭರವಸೆ ನೀಡಿದ್ದರು. ಆದರೆ ಅದಿನ್ನೂ ಭರವಸೆಯಾಗಿಯೇ ಉಳಿದಿದೆ.

( ಪ್ರಮುಖ ಆರೋಪಿ ಧನಂಜಯ ದೇಸಾಯಿ )
ಆಗಿನ ಯುಪಿಎ ಸರಕಾರವೂ ತನ್ನನ್ನು ವಂಚಿಸಿದೆ ಎನ್ನುತ್ತಾರೆ ಸಾದಿಕ್.
ಸಾದಿಕ್ ಕುಟುಂಬಕ್ಕೆ ಸರಕಾರವು ಕೇವಲ ಐದು ಲ.ರೂ.ಪರಿಹಾರವನ್ನು ನೀಡಿ ಕೈತೊಳೆದುಕೊಂಡಿದೆ. ಸಾದಿಕ್ರ ಕಿರಿಯ ಪುತ್ರನಿಗೆ ಉದ್ಯೋಗದ ಭರವಸೆಯನ್ನೂ ಸರಕಾರವು ನೀಡಿತ್ತು. ಅದೂ ಈಡೇರಿಲ್ಲ. ಮೊಹ್ಸಿನ್ ಸರಕಾರಿ ನೌಕರನಾಗಿರಲಿಲ್ಲ, ಹೀಗಾಗಿ ಈ ಭರವಸೆಯ ಈಡೇರಿಕೆ ಸಾಧ್ಯವಿಲ್ಲ ಎಂದು ಸರಕಾರವು ಹೇಳಿಯೂಬಿಟ್ಟಿದೆ. ಪುಣೆಗೆ ತನಿಖೆಗೆ ಆಗಮಿಸಿದ್ದ ಪೊಲೀಸ್ ತಂಡವೊಂದು ಕೇಂದ್ರ ಸರಕಾರವು ಮೂರು ಲ.ರೂ.ಪರಿಹಾರದ ಕೊಡುಗೆಯನ್ನು ನೀಡಿದೆ ಎಂದು ಹೇಳಿತ್ತು. ಆದರೆ ಅದಿನ್ನೂ ಸಾದಿಕ್ ಕುಟುಂಬದ ಕೈ ಸೇರಿಲ್ಲ.
ಹತ್ಯೆಯಾಗುವ ಮುನ್ನ ಐಟಿ ಉದ್ಯೋಗಿಯಾಗಿದ್ದ ಮೊಹ್ಸಿನ್ ತನ್ನ ಕುಟುಂಬದ ಏಕೈಕ ಆದಾಯ ಮೂಲವಾಗಿದ್ದರು. ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿರುವ ಅವರ ಸಾವಿನ ಬಳಿಕ ಸಾದಿಕ್ ಕುಟುಂಬವು ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ.
ನಿಕಂ ಸ್ಥಾನಕ್ಕೆ ರೋಹಿಣಿ ಸಾಲಿಯಾನ್ ನೇಮಕಕ್ಕೆ ಕೋರಿ ಸಾದಿಕ್ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್,ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ರಾಜನಾಥ ಸಿಂಗ್ ಅವರಿಗೆ ಪತ್ರಗಳನ್ನು ಬರೆದಿದ್ದಾರೆ. ಆದರೆ ಈವರೆಗೂ ಅವರಿಗೆ ಉತ್ತರಗಳು ಬಂದಿಲ್ಲ. ಪ್ರಕರಣದ ವಿಚಾರಣೆ ಜು.4ರಂದು ಆರಂಭಗೊಳ್ಳುತ್ತಿದ್ದು, ಅದಕ್ಕೆ ಮುನ್ನ ಸರಕಾರಿ ಅಭಿಯೋಜಕರನ್ನು ಸಾದಿಕ್ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಆದರೆ ಅವರು ಮಾತ್ರ ನ್ಯಾಯ ದೊರೆಯುವ ಭರವಸೆಯನ್ನು ಬಿಟ್ಟಿಲ್ಲ. ಸಂವಿಧಾನ ಮತ್ತು ನ್ಯಾಯಾಂಗದಲ್ಲಿ ಸಂಪೂರ್ಣ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಎಚ್ಆರ್ಎಸ್ ನಾಯಕ ಧನಂಜಯ ದೇಸಾಯಿ ಮುಖ್ಯ ಆರೋಪಿಯಾಗಿದ್ದು ಆತ ಸೇರಿದಂತೆ ಒಟ್ಟು 21 ಜನರು ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.







