4 ಕೋಟಿ ವಿಮೆ ಹಣಕ್ಕಾಗಿ ತನ್ನ ಸಾವಿನ ನಾಟಕ ಹೆಣೆಯಲು ವೈಟರ್ ನನ್ನು ಕೊಂದ ಭೂಪ

ನಾಶಿಕ್, ಜೂ.28: ನಾಲ್ಕು ಕೋಟಿ ರೂ. ವಿಮೆ ಹಣ ಪಡೆಯುವ ಸಲುವಾಗಿ ತಾನು ಸತ್ತಿದ್ದೇನೆಂದು ಲೋಕದ ಕಣ್ಣಿಗೆ ಮಣ್ಣೆರಚುವುದಕ್ಕಾಗಿ ಇಲ್ಲಿನ ಚಂಡ್ವಡ್ ಎಂಬಲ್ಲಿನ ರಿಯಲ್ ಎಸ್ಟೇಟ್ ಬ್ರೋಕರ್ ಒಬ್ಬ ರೆಸ್ಟೋರೆಂಟ್ ಒಂದರ ಬಡಪಾಯಿ ವೈಟರ್ ನನ್ನು ತನ್ನ ಮೂವರು ಸಹಚರರ ಜತೆ ಸೇರಿ ಕೊಲೆಗೈದಿದ್ದಾನೆ.
ಆರೋಪಿ ರಾಮದಾಸ್ ವಾಘ್ (39) ತನ್ನ ಯೋಜನೆ ಯಶಸ್ವಿಯಾಯಿತು ಎಂದು ಅಂದುಕೊಳ್ಳುವಷ್ಟರಲ್ಲಿ ಎಲ್ಲವೂ ತಲೆಕೆಳಗಾಗಿತ್ತು. ಆರಂಭದಲ್ಲಿ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿದ್ದ ಪೊಲೀಸರು ಪೋಸ್ಟ್ ಮಾರ್ಟಂ ವರದಿಯಲ್ಲಿ ವ್ಯಕ್ತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಹಾಗೂ ತಲೆಯಲ್ಲಿ ಹರಿತವಾದ ವಸ್ತುವಿನಿಂದುಂಟಾದ ಗಾಯವಿದೆ ಎಂದು ಬರೆದಿದ್ದನ್ನು ಆಧರಿಸಿ ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಆರೋಪಿ ವಾಘ್ ಗೆ ಕೊಲೆ ನಡೆಸಲು ಸಹಕರಿಸಿದ ಮೂವರನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಮೃತ ವ್ಯಕ್ತಿ ಮುಬಾರಕ್ ಚಾಂದ್ ಪಾಷಾ ತಮಿಳುನಾಡಿನ ಸೇಲಂ ಜಿಲ್ಲೆಯವನಾಗಿದ್ದು, ತನ್ನ ವೃದ್ಧ ಹೆತ್ತವರನ್ನು ಅಗಲಿದ್ದಾನೆ.





