ಮಾದಕ ಸೇವನೆಯಿಂದ ಆದರ್ಶ ಸಮಾಜ ಕಣ್ಮರೆ: ನ್ಯಾ.ಉಷಾ ರಾಣಿ ವಿಷಾದ

ಸೊರಬ, ಜೂ.28: ಮಾದಕ ಸೇವನೆಯಿಂದ ಯುವ ಜನಾಂಗದ ಬಲಿಯಾಗುತ್ತಿದ್ದು, ಆದರ್ಶ ಸಮಾಜ ಕಣ್ಮರೆಯಾಗುತ್ತಿದೆ ಎಂದು ಹಿರಿಯ ನ್ಯಾಯಾಧೀಶೆ ಉಷಾ ರಾಣಿ ವಿಷಾದ ವ್ಯಕ್ತಪಡಿಸಿದರು.
ಪಟ್ಟಣದ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬುಧವಾರ ಹಮ್ಮಿಕೊಂಡಿದ್ದ ಸ್ವಾಸ್ಥ್ಯ ಸಂಕಲ್ಪ ತಾಲ್ಲೂಕು ಅಭಿಯಾನ ಹಾಗೂ ಮಾದಕ ವಸ್ತು ಸೇವನೆ ಪರಿಣಾಮ ಕುರಿತು ಕಿರುಚಿತ್ರ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಅಭಿವೃದ್ಧಿಯನ್ನು ಸಹಿಸಲಾರದ ಸಮಾಜಘಾತುಕ ಶಕ್ತಿಗಳು ಯುವ ಜನಾಂಗವನ್ನು ಗುರಿಯಾಗಿಟ್ಟುಕೊಂಡು ಮಾದಕ ವಸ್ತುಗಳನ್ನು ಪೂರೈಸಿ ಸಮಾಜದ ಸ್ವಥ್ಯ ಹಾಳು ಮಾಡುತ್ತಿವೆ. ಈ ಬಗ್ಗೆ ವಿದ್ಯಾವಂತ ಯುವಕರು ದುಶ್ಚಟಗಳಿಗೆ ಬಲಿಯಾಗುವ ಜನರ ಬಗ್ಗೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.
ದುಶ್ಚಟಗಳಿಗೆ ಬಲಿಯಾಗದಂತೆ ನೋಡಿಕೊಳ್ಳುವ ಜಬಾಬ್ದಾರಿ ಪೋಷಕರು ಹಾಗೂ ಶಿಕ್ಷಕರ ಮೇಲಿದ್ದು, ಉತ್ತಮ ಸಮಾಜ ನಿರ್ಮಾಣಕ್ಕಾಗಿ ಪ್ರತಿಯೊಬ್ಬರು ಕಾಳಜಿ ವಹಿಸಬೇಕು ಎಂದ ಅವರು, ಪೋಷಕರು ಮಕ್ಕಳಿಗೆ ತೋರಿಸುವ ಪ್ರೀತಿ ಭಯ ಮಿಶ್ರಿತವಾಗಿರಬೇಕೆ ಹೊರತು ಪ್ರೀತಿಯೇ ಮುಖ್ಯವಾಗಿ ವ್ಯಕ್ತಗೊಂಡಾಗ ಭವಿಷ್ಯದಲ್ಲಿ ಅನಾಹುತ ಸಂಭವಿಸುತ್ತಿವೆ ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀಕಾಂತ್ ಶೇಟ್, ಕಿರಿಯ ನ್ಯಾಯಾಧೀಶ ರಾಘವೇಂದ್ರ ಶೆಟ್ಟಿಗಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಮಂಜುನಾಥ್, ಉಪ ಪ್ರಾಂಶುಪಾಲ ಬಸವರಾಜ್ ಜಡ್ಡಿಹಳ್ಳಿ, ವೃತ್ತ ನಿರೀಕ್ಷಕ ಉಮಾಪತಿ, ಪಿಎಸ್‌ಐ ಪಾರ್ವತಿ ಬಾಯಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಪಿ.ಕೆ.ರಮೇಶ್, ಮಹಾಂತೇಶ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಎಂ.ಎಸ್.ಕಾಳಿಂಗರಾಜ್, ದಿನಕರಭಟ್ ಭಾವೆ ಮತ್ತಿತರರು ಹಾಜರಿದ್ದರು.







