ಖಾಸಗಿ ತೋಟದಿಂದ ಮಾವಿನ ಹಣ್ಣು ಹೆಕ್ಕಿದ ಬಾಲಕಿಯ ಹಿಂಸಿಸಿ ಕೊಲೆ

ಪಾಟ್ನಾ,ಜೂ.28 : ಬಿಹಾರದ ಅರಾರಿ ಜಿಲ್ಲೆಯ ತೀನ್ ತಿಕ್ರಿ ಗ್ರಾಮದಲ್ಲಿ ಖಾಸಗಿ ವ್ಯಕ್ತಿಯೊಬ್ಬರ ಮಾವಿನ ತೋಪು ಪ್ರವೇಶಿಸಿ ಮಾವಿನ ಹಣ್ಣುಗಳನ್ನು ಹೆಕ್ಕಿದ ಎಂಟು ವರ್ಷದ ಮುಸ್ಲಿಂ ಬಾಲಕಿಯನ್ನು ಹಿಂಸಿಸಿ ಕೊಂದ ಘಟನೆ ರವಿವಾರ ನಡೆದಿದೆ.ಘಟನೆ ನಡೆದ ಗ್ರಾಮ ನೇಪಾಳದ ಗಡಿ ಪ್ರದೇಶದಲ್ಲಿದೆ.
ಈದ್ ಮುನ್ನಾ ದಿನ ಬಾಲಕಿ ಅಮೆರುನ್ ಖಟೂನ್ ತನ್ನ ತಂದೆ ಇಬ್ರಾಹಿಂ ಶಫಿಯೊಂದಿಗೆ ಶಾಪಿಂಗಿಗೆ ತೆರಳಿ ಹಿಂದಿರುಗುವಾಗ ತೋಟವೊಂದರಿಂದ ಕೆಲ ಮಾವಿನ ಹಣ್ಣುಗಳನ್ನು ಕೀಳುವುದಾಗಿ ಹೇಳಿದ್ದಳು. ಆಕೆಯ ತಂದೆ ಆಕೆಯನ್ನು ತಡೆದರೂ, ಸ್ವಲ್ಪವೇ ಹೊತ್ತಿನಲ್ಲಿ ಆಕೆ ಅಲ್ಲಿಂದ ನಾಪತ್ತೆಯಾಗಿದ್ದು ಅಲ್ಲಿದ್ದ ಜನಜಂಗುಳಿಯಿಂದಾಗಿ ಶಫಿಗೆ ತಿಳಿಯಲಿಲ್ಲ.
ಮನೆ ಹತ್ತಿರದಲ್ಲಿಯೇ ಇರುವುದರಿಂದ ಆಕೆ ಹಿಂದಿರುಗಬಹುದು ಎಂದು ಯೊಚಿಸಿ ಶಫಿ ಮನೆಯತ್ತ ನಡೆದಿದ್ದರು. ಆದರೆ ರವಿವಾರ ಸಂಜೆಯಾದರೂ ಆಕೆ ಮನೆಗೆ ಹಿಂದಿರುಗದೇ ಇದ್ದಾಗ ಗಾಬರಿಗೊಂಡ ಮನೆಯವರು ಹುಡುಕಲು ಆರಂಭಿಸಿದಾಗ ಆಕೆ ಆ ತೋಟದ ಸಮೀಪದ ಬಾವಿಯೊಂದರ ಬಳಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾಳೆಂದು ಗ್ರಾಮಸ್ಥರು ಮಾಹಿತಿ ನೀಡಿದ್ದರು.
‘‘ಆಕೆಯನ್ನ ಭೀಕರವಾಗಿ ಕೊಲೆಗೈಯ್ಯಲಾಗಿತ್ತು. ದೇಹದ ತುಂಬೆಲ್ಲಾ ಗಾಯದ ಗುರುತುಗಳಿದ್ದವು. ಆಕೆ ಆಕಸ್ಮಿಕವಾಗಿ ಕರೆಂಟ್ ಶಾಕ್ ತಗಲಿ ಮೃತ ಪಟ್ಟಿದ್ದಾಳೆಂದು ಸಾಬೀತುಪಡಿಸುವ ಸಲುವಾಗಿ ಕರೆಂಟ್ ಶಾಕ್ ನೀಡಲಾಗಿತ್ತು,’’ ಎಂದು ಶಫಿ ಆರೋಪಿಸಿದ್ದಾರೆ.
ಮಾವಿನ ತೋಪಿನ ಮಾಲಕ ಸಂಜಯ್ ಮೆಹ್ತಾ ಮತ್ತಾತನ ಸಹಚರರು ತನ್ನಮಗಳನ್ನು ಕೊಂದಿದ್ದಾರೆ, ಮಾವಿನ ತೋಪಿನಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ ಎಂದು ಹೇಳಿದ್ದಾರೆ.
ಬಾಲಕಿಯ ಸಾವಿಗೆ ನಿಖರ ಕಾರಣ ಪೋಸ್ಟ್ ಮಾರ್ಟಂ ವರದಿಯ ನಂತರವಷ್ಟೇ ತಿಳಿಯುವುದು ಎಂದು ಪೊಲೀಸರು ಹೇಳಿದ್ದಾರೆ. ಬಾಲಕಿಯ ತಂದೆ ನೀಡಿದ ದೂರಿನ ಆಧಾರದಲ್ಲಿ ಮಾವಿನ ತೋಪಿನ ಮಾಲಕಸಂಜಯ್ ಮೆಹ್ತಾ ಮತ್ತಾತನ ಸಹಚರ ವಿನೋದ್ ಮೆಹ್ತಾ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು ಇಬ್ಬರೂ ತಲೆಮರೆಸಿಕೊಂಡಿದ್ದಾರೆ.







