ವಿಮರ್ಶಕರು ಹಾಸ್ಯ ಸಾಹಿತ್ಯವನ್ನು ಲಘುವಾಗಿ ಪರಿಗಣಿಸಿದ್ದಾರೆ: ಭುವನೇಶ್ವರಿ ಹೆಗ್ಡೆ ವಿಷಾದ

ಬೆಳ್ತಂಗಡಿ, ಜೂ.28: ವಿಮರ್ಶಕರು ಹಾಸ್ಯ ಸಾಹಿತ್ಯವನ್ನು ಲಘುವಾಗಿ ಪರಿಗಣಿಸಿ, ಗಂಭೀರವಾಗಿ ಉಪೇಕ್ಷಿಸಿದ್ದಾರೆ ಎಂದು ಹಾಸ್ಯ ಲೇಖಕಿ ಭುವನೇಶ್ವರಿ ಹೆಗಡೆ ವಿಷಾದಿಸಿದರು.
ಅವರು, ಬುಧವಾರ ಉಜಿರೆ ಶ್ರೀ ಧ. ಮಂ.ಕಾಲೇಜಿನಲ್ಲಿ ಕನ್ನಡ ಸಂಘ ಹಾಗು ಬೆಳ್ತಂಗಡಿ ತಾ.ಕ.ಸಾ.ಪ.ವತಿಯಿಂದ ನಡೆದ ಹಾಸ್ಯ ಸಾಹಿತ್ಯ: ನೆಲೆ-ಬೆಲೆ ವಿಷಯದಲ್ಲಿ ಉಪನ್ಯಾಸ, ಅನುಭವ ಕಥನ ಮತ್ತು ಸಂವಾದವನ್ನು ನಡೆಸಿ ಮಾತನಾಡಿದರು.
ಹಾಸ್ಯ ಸಾಹಿತ್ಯಕ್ಕೆ ಓದುಗರೇ ವಿಮರ್ಶಕರು. ವಿಮರ್ಶಕರ ವಿಮರ್ಶೆಗೆ ಒಳಪಡದ ಸಾಹಿತ್ಯವಿದ್ದರೆ ಅದು ಹಾಸ್ಯ ಸಾಹಿತ್ಯ ಮಾತ್ರ. ಸುತ್ತಮುತ್ತಲಿನ ಘಟನೆಗಳನ್ನು ಗಮನಿಸುವ ಪ್ರವೃತ್ತಿ ಇದ್ದರೆ ಹಾಸ್ಯ ತನ್ನಿಂತಾನೇ ಸೃಷ್ಟಿಯಾಗಬಲ್ಲದು. ಇತರರ ಅಂಗವೈಕಲ್ಯ, ಜಾತಿ, ಧರ್ಮ ತಮಾಷೆಯ ವಸ್ತುವಾಗಬಾರದು. ಸ್ವಭಾವ ವೈಚಿತ್ರ್ಯಗಳು ಹಾಸ್ಯವನ್ನುಂಟುಮಾಡುತ್ತವೆ ಎಂದು ವಿವರಿಸಿದರು.
ವಿದ್ಯಾರ್ಥಿಗಳು ಈಗಿರುವ ಉಲ್ಲಾಸ, ಉತ್ಸಾಹಗಳನ್ನು ವಿದ್ಯಾರ್ಥಿ ಜೀವನ ಮುಗಿದ ಮೇಲೆಯೂ ಉಳಿಸಿಕೊಳ್ಳಬೇಕಾದರೆ ಹಾಸ್ಯ ಪ್ರಜ್ಞೆ ಅಗತ್ಯ. ವಿದ್ಯಾರ್ಥಿಗಳಿಗೆ ಈಗಿರುವಂತೆ ರಿಯಾಯಿತಿ ಮುಂದೆ ಇರುವುದಿಲ್ಲ. ಕೆಲಸ ಸಿಗುವ ಸಂದರ್ಭ ಸ್ನೇಹಕ್ಕೂ ಕಡಿವಾಣ ಬೀಳುತ್ತದೆ. ಅವಕಾಶವನ್ನೂ ಇನ್ನೊಬ್ಬರಿಗೆ ಬಿಟ್ಟುಕೊಡುವುದಿಲ್ಲ. ಇಲ್ಲಿಂದಲೇ ವಾಸ್ತವ, ಕಹಿ ಸತ್ಯದ ಅನಾವರಣವಾಗುತ್ತದೆ. ಹಾಸ್ಯ ಪ್ರಜ್ಞೆಯು ಸೋಲು, ವಿಷಾದವನ್ನು ಎದುರಿಸುವ ಧೈರ್ಯವನ್ನು ನೀಡುತ್ತದೆ ಎಂದರು.
ಕಾಲೇಜಿನ ಪ್ರಾಚಾರ್ಯ ಡಾ ಕೆ.ಎಸ್. ಮೋಹನ ನಾರಾಯಣ ಅವರು, ಪಠ್ಯೇತರ ಚಟುವಟಿಕೆಗಳಿಂದ ಮಾತ್ರ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಾಧ್ಯ. ಹೀಗಾಗಿ ಕಾಲೇಜಿನಲ್ಲಿ ನಾವು ಎಲ್ಲಾ ವಿಭಾಗಗಳಿಗೆ ಪಠ್ಯೇತರ ಚಟುವಟಿಕೆ ನಡೆಸಲು ಪ್ರೋತ್ಸಾಹ ನೀಡುತ್ತಿದ್ದೇವೆ. ಇದರಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವುದು ಮುಖ್ಯ ಎಂದರು.
ಕಾಲೇಜಿನ ಪರವಾಗಿ ಭುವನೇಶ್ವರಿ ಹೆಗಡೆ ಅವರನ್ನು ಸಮ್ಮಾನಿಸಲಾಯಿತು. ಸಮಾರಂಭದ ಬಳಿಕ ಕನ್ನಡ ಸಂಘದ ಪದಾಧಿಕಾರಿಗಳ ಪದಗ್ರಹಣ ನೆರವೇರಿತು. ಕನ್ನಡ ವಿಭಾಗ ಮುಖ್ಯಸ್ಥ ಡಾ ಬಿ.ಪಿ.ಸಂಪತ್ ಕುಮಾರ್ ಸ್ವಾಗತಿಸಿ ಪ್ರಸ್ತಾವಿಸಿದರು.







