ಪಾನ್ ಕಾರ್ಡ್ ಕಡ್ಡಾಯ ಬೇಡ: ಸಂಸದ ನಳಿನ್ ಸೂಚನೆ

ಮಂಗಳೂರು, ಜೂ.28: ಪಾನ್ ಕಾರ್ಡ್ ಇಲ್ಲದಿದ್ದಲ್ಲಿ ಬ್ಯಾಂಕ್‌ಗಳು ಖಾತೆ ತೆರೆಯಲು ನಿರಾಕರಣೆ ಮಾಡುವಂತಿಲ್ಲ. ಖಾತೆ ತೆರೆದ ಮೇಲೆ ಅಗತ್ಯ ಬಿದ್ದಾಗ ಪಾನ್ ಕಾರ್ಡ್ ಮಾಡಿಸಬಹುದು ಎಂದು ಸಂಸದ ನಳಿನ್ ಕುಮಾರ್ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಬುಧವಾರ ನಡೆದ ದ.ಕ. ಜಿಲ್ಲಾ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳು ಬ್ಯಾಂಕ್ ಖಾತೆ ತೆರೆಯುವಾಗ ಪಾನ್ ಕಾರ್ಡ್ ಕಡ್ಡಾಯ ಮಾಡಿರುವುದರಿಂದ ಬಹುತೇಕ ಬ್ಯಾಂಕ್‌ಗಳು ನಿಗದಿತ ಗುರಿ ಸಾಧಿಸಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದಾಗ ಸಂಸದರು ಈ ಸೂಚನೆ ನೀಡಿದರು.
ಕೆಲವು ಬ್ಯಾಂಕ್‌ಗಳು ಜನ್ ಧನ್ ಖಾತೆಗಳ ಸಂಖ್ಯೆಗೆ ಅನುಗುಣವಾಗಿ ರುಪೇ ಕಾರ್ಡ್ ವಿತರಿಸದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನಳಿನ್, ಮುಂದಿನ ಸಭೆ ನಡೆಯುವುದರೊಳಗೆ ರುಪೇ ಕಾರ್ಡ್ ಗುರಿ ಸಾಧಿಸಲೇಬೇಕು. ರುಪೇ ಕಾರ್ಡ್‌ನ್ನು ಹೇಗೆ ಬಳಕೆ ಮಾಡಬೇಕು ಎನ್ನುವ ಕುರಿತು ಜನರಲ್ಲಿ ಮಾಹಿತಿ ಕೊರತೆಯಿದೆ. ಬ್ಯಾಂಕ್‌ಗಳು ಕೂಡಲೆ ಮಾಹಿತಿ ಕಾರ್ಯಕ್ರಮಗಳನ್ನು ಅಲ್ಲಲ್ಲಿ ಆಯೋಜಿಸಬೇಕು ಎಂದು ಸಲಹೆ ನೀಡಿದರು.
ಸಭೆಗೆ ಬಹುತೇಕ ಬ್ಯಾಂಕ್‌ಗಳ ಕಿರಿಯ ಅಧಿಕಾರಿಗಳೇ ಆಗಮಿಸಿದ್ದರು. ಕೆಳಹಂತದ ಅಧಿಕಾರಿಗಳು ಬಂದರೆ ಏನೂ ಪ್ರಯೋಜನವಿಲ್ಲ. ಇನ್ನು ಮುಂದೆ ನಿರ್ಧಾರ ಕೈಗೊಳ್ಳುವ ಮಟ್ಟದ ಅಧಿಕಾರಿಗಳನ್ನೇ ಕಳುಹಿಸಿಕೊಡುವಂತೆ ಎಲ್ಲ ಬ್ಯಾಂಕ್ ಅಧ್ಯಕ್ಷರಿಗೆ ಪತ್ರ ಬರೆದು ಸೂಚನೆ ನೀಡಿ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ರಾಘವ ಯಜಮಾನ್ಯ ಅವರಿಗೆ ನಳಿನ್ ಸೂಚಿಸಿದರು. ಸಭೆಗೆ ಗೈರುಹಾಜರಾದ ಬ್ಯಾಂಕ್‌ಗಳಿಗೆ ನೋಟಿಸ್ ಜಾರಿ ಮಾಡುವಂತೆಯೂ ಅವರು ಸೂಚನೆ ನೀಡಿದರು.
ಸಭೆಯಲ್ಲಿ ನೀಡಿದ ಅಜೆಂಡಾ ಪ್ರತಿಯಲ್ಲಿ ಬ್ಯಾಂಕ್‌ಗಳ ಸಾಧನೆಯ ಅಂಕಿ ಅಂಶಗಳು ತಪ್ಪಾಗಿ ದಾಖಲಾಗಿರುವುದು ಮಾತ್ರವಲ್ಲ, ಒಂದೊಂದು ಪ್ರತಿಯಲ್ಲಿ ಒಂದೊಂದು ರೀತಿಯ ಅಂಕಿ ಅಂಶ ಮುದ್ರಣಗೊಂಡಿರುವುದು ಕಂಡುಬಂತು. ಇದರಿಂದ ಸಿಟ್ಟುಗೊಂಡ ನಳಿನ್ ಕುಮಾರ್, ಲೀಡ್ ಬ್ಯಾಂಕ್ ಮ್ಯಾನೇಜರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಸರಿಯಾದ ಅಂಕಿ ಅಂಶಗಳೊಂದಿಗೆ ವಾರದೊಳಗೆ ಮತ್ತೊಂದು ಸಭೆ ಕರೆಯುವಂತೆ ನಿರ್ದೇಶಿಸಿದರು.
ಮುಂದಿನ ಸಭೆಯನ್ನು ಜುಲೈ 14ರಂದು ನಡೆಸುವುದಾಗಿ ತೀರ್ಮಾನಿಸಲಾಯಿತು. ಜಿ.ಪಂ. ಉಪಕಾರ್ಯದರ್ಶಿ ಉಮೇಶ್ ಹಾಗೂ ಲೀಡ್ ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.







