ಜಿಎಸ್‌ಟಿ ಮಹಾ ಪ್ರಮಾದ,ಉದ್ಘಾಟನಾ ಕಾರ್ಯಕ್ರಮಕ್ಕೆ ಟಿಎಂಸಿ ಬಹಿಷ್ಕಾರ:ಮಮತಾ

ಕೋಲ್ಕತಾ,ಜೂ.28: ಜಿಎಸ್‌ಟಿಯನ್ನು ಜಾರಿಗೊಳಿಸಲು ಅನಗತ್ಯ ಅವಸರವನ್ನು ಮಾಡಲಾಗುತ್ತಿದೆ ಎಂದು ಟೀಕಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಪ್ರತಿಭಟನೆಯ ಸಂಕೇತವಾಗಿ ತನ್ನ ತೃಣಮೂಲ ಕಾಂಗ್ರೆಸ್ ಪಕ್ಷವು ಜೂ.30ರಂದು ಮಧ್ಯರಾತ್ರಿ ಜಿಎಸ್‌ಟಿಗೆ ಚಾಲನೆ ನೀಡಲು ದಿಲ್ಲಿಯ ಸಂಸತ್ ಭವನದಲ್ಲಿ ಆಯೋಜಿಸಲಾಗಿರುವ ಸಮಾರಂಭಕ್ಕೆ ಹಾಜರಾಗುವುದಿಲ್ಲ ಎಂದು ಹೇಳಿದ್ದಾರೆ.
ಜಿಎಸ್‌ಟಿ ಜಾರಿ ಬಗ್ಗೆ ನಮಗೆ ತೀವ್ರ ಕಳವಳವಿದೆ. ನೋಟು ಅಮಾನ್ಯ ಕ್ರಮದ ಬಳಿಕ ಜಿಎಸ್‌ಟಿ ಜಾರಿಗಾಗಿ ಅನಗತ್ಯ ಅವಸರವು ಕೇಂದ್ರದ ಇನ್ನೊಂದು ಮಹಾ ಪ್ರಮಾದವಾಗಿದೆ ಎಂದು ಮಮತಾ ಬುಧವಾರ ಫೇಸ್‌ಬುಕ್‌ನಲ್ಲಿ ಹೇಳಿದ್ದಾರೆ.
ನಾವು ಆರಂಭದಿಂದಲೂ ಜಿಎಸ್‌ಟಿ ಪರವಾಗಿದ್ದೇವೆ, ಆದರೆ ಅದನ್ನು ಜಾರಿಗೊಳಿ ಸಲು ಸರಕಾರವು ಮುಂದುವರಿಯುತ್ತಿರುವ ರೀತಿಯು ನಮ್ಮನ್ನು ಚಿಂತೆಗೀಡುಮಾಡಿದೆ ಎಂದಿರುವ ಅವರು, ಜಿಎಸ್‌ಟಿಯ ಸೂಕ್ತ ಜಾರಿಗೆ ಇನ್ನಷ್ಟು ಕಾಲಾವಕಾಶ ಅಗತ್ಯವಿದೆ ಎಂದು ನಾವು ಪದೇಪದೇ ಸಲಹೆ ನೀಡಿದ್ದರೂ ಅದು ಯಾರ ಕಿವಿಗೂ ಬಿದ್ದಿಲ್ಲ. ಇಡೀ ಉದ್ಯಮ ಸಮುದಾಯ, ವಿಶೇಷವಾಗಿ ಸಣ್ಣ ಮತ್ತು ಮಧ್ಯಮ ಉದ್ಯಮಗಳು ಜಿಎಸ್‌ಟಿ ಬಗ್ಗೆ ಆತಂಕಗೊಂಡಿವೆ ಮತ್ತು ಗೊಂದಲದಲ್ಲಿವೆ ಎಂದಿದ್ದಾರೆ.
ಸೂಕ್ತ ಯೋಜನೆಯಿಲ್ಲದ ಜಿಎಸ್‌ಟಿ ಉದ್ಘಾಟನೆಗೆ ಕೇವಲ 60 ಗಂಟೆಗಳು ಬಾಕಿಯಿವೆ ಮತ್ತು ಏನಾಗುತ್ತಿದೆ ಎನ್ನುವುದು ಯಾರಿಗೂ ಸರಿಯಾಗಿ ತಿಳಿದಿಲ್ಲ ಎಂದಿರುವ ಅವರು, ಹಲವಾರು ಕಡೆಗಳಲ್ಲಿ ಔಷಧಿಗಳಂತಹ ಅಗತ್ಯ ಸಾಮಗ್ರಿಗಳು ದೊರೆಯುತ್ತಿಲ್ಲ. ಸ್ಪಷ್ಟತೆಯ ಕೊರತೆ ಮತ್ತು ತಪ್ಪು ನಿರ್ವಹಣೆಯಿಂದಾಗಿ ವಿವಿಧ ಸರಕುಗಳ ಬೆಲೆಗಳು ಏರಿಕೆಯಾಗುತ್ತಿವೆ ಎಂದಿದ್ದಾರೆ.
ಜು.1ರಿಂದ ಜಿಎಸ್‌ಟಿ ಜಾರಿಯನ್ನು ಅಪ್ಪಿಕೊಳ್ಳಲು ಆರ್ಥಿಕತೆಯು ಇನ್ನೂ ಸಜ್ಜಾಗಿಲ್ಲ ಎಂದ ಅವರು, ಜವಳಿ ಉದ್ಯಮವು ಘೋಷಿಸಿರುವ ಮೂರು ದಿನಗಳ ಮುಷ್ಕರವು ಇದಕ್ಕೆ ನಿದರ್ಶನವಾಗಿದೆ ಎಂದಿರುವ ಮಮತಾ,ಜಿಎಸ್‌ಟಿ ಜಾರಿಗೆ ಇನ್ನೂ ಆರು ತಿಂಗಳು ಸಮಯಾವಕಾಶದ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.







