ಗುತ್ತಿಗೆ ಕಾರ್ಮಿಕರ ಖಾಯಂ ಕುರಿತು ಆದೇಶ ಹೊರಡಿಸಲು ಆಗ್ರಹ
ಬೆಂಗಳೂರು, ಜೂ.28: ರಾಜ್ಯಾದ್ಯಂತ ಗುತ್ತಿಗೆ ಕಾರ್ಮಿಕರನ್ನು ಖಾಯಂ ಮಾಡಲಾಗುತ್ತದೆ ಹಾಗೂ ಗುತ್ತಿಗೆ ಕಾರ್ಮಿಕರಿಗೆ ನೇರ ಪಾವತಿ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿರುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಅದನ್ನು ಜಾರಿ ಮಾಡಲು ಕೂಡಲೇ ಸರಕಾರ ಆದೇಶ ಹೊರಡಿಸಬೇಕು ಎಂದು ಬಿಬಿಎಂಪಿ ಗುತ್ತಿಗೆ ಪೌರ ಕಾರ್ಮಿಕರ ಸಂಘ ಆಗ್ರಹಿಸಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ನಿರ್ಮಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ಎಲ್ಲ ಗುತ್ತಿಗೆ ಕಾರ್ಮಿಕರನ್ನು ಖಾಯಂ ಮಾಡುತ್ತೇವೆ. ಖಾಯಂ ಮಾಡುವವರೆಗೂ ನೇರ ವೇತನ ಪಾವತಿಸಲಾಗುತ್ತದೆ. ಗುತ್ತಿಗೆ ಪದ್ಧತಿ ರದ್ದು ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲಾಗುತ್ತದೆ ಎಂದು ಘೋಷಣೆ ಮಾಡಿರುವ ನಿರ್ಧಾರ ಸ್ವಾಗತಾರ್ಹವಾಗಿದೆ. ಆದರೆ, ಅದು ಮಾತಿನಲ್ಲಿಯೇ ಉಳಿದಿದೆ. ಹೀಗಾಗಿ ಕೂಡಲೇ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್‌ರೊಳಗೆ ಎಲ್ಲ ಕಾರ್ಮಿಕರನ್ನು ಖಾಯಂ ಮಾಡಲಾಗುತ್ತದೆ ಎಂದು ಆಶ್ವಾಸನೆ ನೀಡಿದ್ದರು. ಆದರೆ, ಜೂ.23 ರಂದು ರಾಜ್ಯಾದ್ಯಂತ ಕೇವಲ 11 ಸಾವಿರ ಕಾರ್ಮಿಕರನ್ನು ಖಾಯಂ ಮಾಡಲಾಗುತ್ತದೆ ಎಂದು ಘೋಷಿಸಿದ್ದಾರೆ. ಇದರಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಕೇವಲ 4 ಸಾವಿರ ಕಾರ್ಮಿಕರನ್ನು ಮಾತ್ರ ಖಾಯಂಗೊಳಿಸಲು ಮುಂದಾಗಿರುವ ಸರಕಾರದ ಕ್ರಮಕ್ಕೆ ನಮ್ಮ ವಿರೋಧವಿದೆ. ರಾಜ್ಯಾದ್ಯಂತ ಕೆಲಸ ಮಾಡುತ್ತಿರುವ ಗುತ್ತಿಗೆ ಕಾರ್ಮಿಕರನ್ನು ಖಾಯಂ ಮಾಡುವ ಕುರಿತು ಕೂಡಲೇ ಘೋಷಣೆ ಮಾಡಿ, ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
ಬಿಬಿಎಂಪಿಯಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರಿಗೆ ವಾರದ ರಜೆ, ಹಬ್ಬದ ರಜೆ, ರಾಷ್ಟ್ರೀಯ ರಜೆಗಳನ್ನು ನೀಡುವಂತೆ ಆಯುಕ್ತರು ಆದೇಶ ಹೊರಡಿಸಿದ್ದರೂ, ಅದನ್ನು ಜಾರಿ ಮಾಡಿಲ್ಲ. 14 ಸಾವಿರ ಸಿಗಬೇಕಾದ ವೇತನ ಎಲ್ಲಿಯೂ ಸಿಗುತ್ತಿಲ್ಲ. ಬದಲಿಗೆ 11 ರಿಂದ 12 ಸಾವಿರ ಅಥವಾ ಅದಕ್ಕಿಂತ ಕಡಿಮೆ ವೇತನ ನೀಡಲಾಗುತ್ತಿದೆ. ರಿಸ್ಕ್ ಅಲೆವೆನ್ಸ್ ಮೂರು ಸಾವಿರ ರೂ.ಗಳನ್ನು ನೀಡುತ್ತಿಲ್ಲ. ಅದಲ್ಲದೆ ಡಿಎ ಹಣ ಸೇರಿದಂತೆ ಆಗಸ್ಟ್ 2016 ರಿಂದ ನೀಡಬೇಕಾದ ಪರಿಷ್ಕೃತ ವೇತನವನ್ನು ಮಾರ್ಚ್ 2017 ರಿಂದ ನೀಡಿದ್ದು, ಮೂರು ತಿಂಗಳ ಬಾಕಿ ವೇತನ ಮಾತ್ರ ಬಿಡುಗಡೆ ಮಾಡಲಾಗಿದೆ ಎಂದು ನಿರ್ಮಲ ಆಕ್ರೋಶ ವ್ಯಕ್ತಪಡಿಸಿದರು.
ಸರಕಾರದ ಆದೇಶದಂತೆ ಶೌಚಾಲಯ, ಕುಡಿಯುವ ನೀರು, ಪೊರಕೆ, ಬಟ್ಟೆ ಬದಲಿಸಲು ಕೋಣೆ ಸೇರಿದಂತೆ ಇನ್ನಿತರೆ ಮೂಲಭೂತ ಸೌಲಭ್ಯಗಳನ್ನು ಕಾರ್ಮಿಕರಿಗೆ ನೀಡಬೇಕು ಎಂದು ತಿಳಿಸಲಾಗಿದೆ. ಇದುವರೆಗೂ ಈ ಸೌಲಭ್ಯಗಳು ಎಲ್ಲಿಯೂ ನೀಡಿಲ್ಲ ಎಂದ ಅವರು, ಕೂಡಲೇ ಪೌರ ಕಾರ್ಮಿಕರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಬೇಡಿಕೆಗಳು: ಸಮಾನ ಕೆಲಸಕ್ಕೆ ಸಮಾನ ವೇತನ ಸಂಬಂಧಪಟ್ಟಂತೆ ಸುಪ್ರಿಂ ಕೋರ್ಟ್‌ನ ಆದೇಶವನ್ನು ಜಾರಿಗೆ ತರಬೇಕು. ರಾಜ್ಯದ ಎಲ್ಲ ಪೌರ ಕಾರ್ಮಿಕರನ್ನು ಖಾಯಂ ಮಾಡಬೇಕು. ರಜೆಗಳ ಕುರಿತು ಇರುವ ಆದೇಶವನ್ನು ಕೂಡಲೇ ಜಾರಿ ಮಾಡಬೇಕು. ಗುತ್ತಿಗೆ ಪದ್ಧತಿ ರದ್ದು ಮಾಡುವುದರ ಕುರಿತು ಹಾಗೂ ಸ್ಥಳೀಯ ಸರಕಾರಗಳಿಂದ ವೇತನ ಸಿಗುವಂತೆ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.







