ಪುತ್ತೂರು: ವ್ಯಕ್ತಿಗೆ ತಂಡದಿಂದ ಹಲ್ಲೆ; ಆರೋಪಿ ಸೆರೆ

ಪುತ್ತೂರು, ಜೂ. 28: ಪೂರ್ವ ದ್ವೇಷದ ಹಿನ್ನೆಲೆಯಲ್ಲಿ 6 ಜನರ ತಂಡವೊಂದು ಟಿಪ್ಪರ್ ಚಾಲಕನಿಗೆ ಹಲ್ಲೆ ನಡೆಸಿ ಗಾಯಗೊಳಿಸಿದ ಘಟನೆ ಪುತ್ತೂರು ನಗರದ ಹೊರ ವಲಯದ ಕಬಕ ಎಂಬಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ಪುತ್ತೂರು ತಾಲೂಕಿನ ಕಬಕ ಗ್ರಾಮದ ಕಲ್ಲಂತಡ್ಕ ನಿವಾಸಿ ಅಹ್ಮದ್ ಕುಂಞಿ ಎಂಬವರ ಪುತ್ರ , ಟಿಪ್ಪರ್ ಚಾಲಕ-ಮಾಲಕನಾಗಿರುವ ಖಾದರ್ (33) ಹಲ್ಲೆಗೊಳಗಾಗಿದ್ದು, ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಂಟ್ವಾಳ ತಾಲೂಕಿನ ವಿಟ್ಲ ಮುಡ್ನೂರು ಗ್ರಾಮದ ಕೊಡಂಗೆ ನಿವಾಸಿ ಸಾದಿಕ್ ಮತ್ತು ಇತರ ಐವರು ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ. ತಾನು ಟಿಪ್ಪರ್ ನಲ್ಲಿ ದುಡಿಯುತ್ತಿದ್ದು, ಕಳೆದ ಒಂದು ತಿಂಗಳ ಹಿಂದೆ ರಫೀಕ್ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬರು ತನಗೆ ಕರೆ ಮಾಡಿ, ನೀನು ಕಲ್ಲಿನ ಕ್ವಾರೆಯ ಉಮರ್ ಅವರ ತಂಟೆಗೆ ಬರ್ತಿದ್ದಿಯಾ, ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಸಿ ಕರೆ ಕಟ್ ಮಾಡಿದ್ದರು. ಆ ಸಂದರ್ಭದಲ್ಲಿ ತಾನು ಆ ನಂಬರನ್ನು ಮೊಬೈಲ್‌ನಲ್ಲಿ ಉಳಿಸಿಕೊಂಡಿದ್ದೆ. ತಾನು ಬುಧವಾರ ಮಧ್ಯಾಹ್ನ ಮನೆಯಿಂದ ಕಬಕಕ್ಕೆ ಬಂದು ಅಲ್ಲಿನ ಮೊಬೈಲ್ ಅಂಗಡಿಯೊಂದರಲ್ಲಿದ್ದ ವೇಳೆ ಅದೇ ನಂಬರಿನಿಂದ ತನ್ನ ಮೊಬೈಲ್‌ಗೆ ಕರೆ ಬಂದಿತ್ತು. ಮೂರು ಬಾರಿ ಕರೆ ಮಾಡಿದಾಗಲೂ ತಾನು ಕರೆ ಸ್ವೀಕರಿಸದೇ ಈ ಬಗ್ಗೆ ಪೊಲೀಸರಿಗೆ ದೂರು ನೀಡಿಲು ತೀರ್ಮಾನಿಸಿ ಅಂಗಡಿಯಿಂದ ಹೊರಬರುತ್ತಿದ್ದ ವೇಳೆ ಅಲ್ಲಿಗೆ ಆಗಮಿಸಿದ ಸಾದಿಕ್ ಮತ್ತು ಇತರ ಐವರು ನಿಮ್ಮಲ್ಲಿ ಮಾತನಾಡಲಿಕ್ಕಿದೆ ಎಂದು ಕರೆದು ಏಕಾಏಕಿಯಾಗಿ ಹಲ್ಲೆ ನಡೆಸಿದ್ದಾರೆ ಎಂದು ಖಾದರ್ ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿಗಳ ಪೈಕಿ ಸಾದಿಕ್ ಎಂಬಾತನನ್ನು ಸ್ಥಳೀಯರು ಹಿಡಿದು ಪುತ್ತೂರು ನಗರ ಪೊಲೀಸರಿಗೆ ಒಪ್ಪಿಸಿದ್ದು, ಉಳಿದ ಐವರು ಆರೋಪಿಗಳು ಕಾರಿನಲ್ಲಿ ಪರಾರಿಯಾಗಿರುವುದಾಗಿ ಅವರು ತಿಳಿಸಿದ್ದಾರೆ.
ಸಾದಿಕ್ ಮೇಲೆಯೂ ಹಲ್ಲೆ: ಸಾದಿಕ್ ತಂಡ ಖಾದರ್ ಅವರ ಮೇಲೆ ಹಲ್ಲೆ ನಡೆಸುತ್ತಿದ್ದ ವೇಳೆ ಸ್ಥಳೀಯರು ಸೇರಿಕೊಂಡು ಆತನನ್ನು ಹಿಡಿದು ಪುತ್ತೂರು ನಗರ ಪೊಲೀಸರಿಗೆ ಒಪ್ಪಿಸಿದ್ದು, ಆತನೂ ಹಲ್ಲೆಗೊಳಗಾಗಿರುವುದಾಗಿ ಅವರು ದೂರಲಾಗಿದೆ.
ಆರೋಪಿ ಸಾದಿಕ್‌ನನ್ನು ಪುತ್ತೂರು ನಗರ ಪೊಲೀಸರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿ, ಬಳಿಕ ವಶಕ್ಕೆ ತೆಗೆದುಕೊಂಡಿರುವುದಾಗಿ ತಿಳಿದು ಬಂದಿದೆ.
ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಗೂಂಡಾ ಕಾಯ್ದೆಯಡಿ ಬಂಧಿತನಾಗಿದ್ದ ಸಾದಿಕ್‌ನ ಮೇಲೆ ಕೊಲೆಯತ್ನ, ಅಪಹರಣ ಸೇರಿದಂತೆ 12ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.







