ವಿಚಾರವಾದಿ ಕೆ.ಎಸ್.ಭಗವಾನ್ ವಿರುದ್ಧ ದೂರು

ಬೆಂಗಳೂರು, ಜೂ.28: ಮೈಸೂರಿನ ಸರಕಾರಿ ಕಲಾ ಮಂದಿರದಲ್ಲಿ ಸಾರ್ವಜನಿಕವಾಗಿ ಗೋಮಾಂಸ ಸೇವಿಸಿ, ಅದನ್ನು ಸೇವಿಸುವಂತೆ ಪ್ರಚೋದಿಸಿದ್ದಾರೆ ಎಂದು ಆರೋಪಿಸಿ ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ವಿರುದ್ಧ ಇಲ್ಲಿನ ವಯ್ಯೊಲಿಕಾವಲ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಗೋ ಸಂರಕ್ಷಣಾ ಪ್ರಕೋಷ್ಟದ ಸಂಚಾಲಕ ಸುಂದರ್‌ರಾಜ್ ರೈ ಎಂಬುವವರು ದೂರು ನೀಡಿದ್ದು,ಪ್ರೊ. ಭಗವಾನ್, ಮಹೇಶ್ ಚಂದ್ರಗುರು ಹಾಗೂ ಇನ್ನಿತರರು ಜು.25 ರಂದು ಮೈಸೂರಿನ ಸರಕಾರಿ ಕಲಾ ಮಂದಿರದಲ್ಲಿ ಚಾರ್ವಾಕ ಸೋಷಿಯಲ್ ಅಂಡ್ ಕಲ್ಚರಲ್ ಟ್ರಸ್ಟ್ ಮತ್ತು ಎವಿಎಸ್‌ಎಸ್ ಸಂಸ್ಥೆಯವರು ಆಯೋಜಿಸಿದ ಕಾರ್ಯಕ್ರಮದಲ್ಲಿ ಸಾರ್ವಜನಿಕವಾಗಿ ಗೋ ಮಾಂಸ ಸೇವಿಸಿ, ಬೇರೆಯವರಿಗೂ ಅದನ್ನು ಸೇವಿಸುವಂತೆ ಪ್ರಚೋದಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಾರ್ಯಕ್ರಮದಲ್ಲಿ ಹಿಂದೂ ಧರ್ಮದ ವಿರುದ್ಧ ಮಾತನಾಡಿ ಹಲವಾರು ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ. ಆ ಕಾರ್ಯಕ್ರಮದಲ್ಲಿ ಹಿಂದೂ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿರುತ್ತಾರೆ. ಇದು ಕೋಮು ಸಾಮರಸ್ಯ ಕೆರಳಿಸಲು ಪ್ರೇರೇಪಿಸಿದಂತಾಗಿದೆ. ಈ ಹಿನ್ನೆಲೆಯಲ್ಲಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸುಂದರ್ ರಾಜ್ ರೈ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.





