ಸೌದಿ ನಿಲುವಿಗೆ ಕತರ್ ಖಂಡನೆ

ದೋಹಾ (ಕತರ್), ಜೂ. 28: ಕೊಲ್ಲಿಯಲ್ಲಿ ಉಂಟಾಗಿರುವ ಬಿಕ್ಕಟ್ಟು ನಿವಾರಣೆಗೆ ಸೌದಿ ಅರೇಬಿಯ ಮತ್ತು ಇತರ ದೇಶಗಳು ಸಲ್ಲಿಸಿರುವ ಬೇಡಿಕೆಗಳ ಬಗ್ಗೆ ಚರ್ಚಿಸಲು ಸೌದಿ ಅರೇಬಿಯ ನಿರಾಕರಿಸಿರುವುದನ್ನು ಕತರ್ ಬುಧವಾರ ಖಂಡಿಸಿದೆ.
ವಾಶಿಂಗ್ಟನ್‌ನಿಂದ ಮಾತನಾಡಿದ ಕತರ್ ವಿದೇಶ ಸಚಿವ ಶೇಖ್ ಮುಹಮ್ಮದ್ ಬಿನ್ ಅಬ್ದುಲ್ರಹಮಾನ್ ಅಲ್-ಥಾನಿ, ಸೌದಿ ಅರೇಬಿಯದ ನಿಲುವು ಸ್ವೀಕಾರಾರ್ಹವಲ್ಲ ಎಂದರು.
ಬಿಕ್ಕಟ್ಟಿನ ಬಗ್ಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರೆಕ್ಸ್ ಟಿಲರ್‌ಸನ್ ಜೊತೆ ಮಾತುಕತೆ ನಡೆಸುವುದಕ್ಕಾಗಿ ಅವರು ಈಗ ಅಮೆರಿಕದಲ್ಲಿದ್ದಾರೆ.
‘‘ಇದು ಅಂತಾರಾಷ್ಟ್ರೀಯ ಸಂಬಂಧಗಳಿಗೆ ಅನ್ವಯಿಸುವ ತತ್ವಗಳಿಗೆ ವಿರುದ್ಧವಾಗಿದೆ. ನೀವು ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿ ಮಾತುಕತೆ ನಡೆಸಲು ನಿರಾಕರಿಸುವಂತಿಲ್ಲ’’ ಎಂದು ಶೇಖ್ ಮುಹಮ್ಮದ್ ಹೇಳಿದರು.
ಬೇಡಿಕೆಯಿಂದ ಹಿಂದೆ ಸರಿಯಲು ಸೌದಿ ನಿರಾಕರಣೆ
ಕೊಲ್ಲಿ ಬಿಕ್ಕಟ್ಟಿಗೆ ಸಂಬಂಧಿಸಿ ವಾಶಿಂಗ್ಟನ್‌ಗೆ ತೆರಳಿರುವ ಸೌದಿ ಅರೇಬಿಯದ ವಿದೇಶ ಸಚಿವ ಆದಿಲ್ ಅಲ್-ಜುಬೇರ್, ಈ ವಿವಾದಕ್ಕೆ ಸಂಬಂಧಿಸಿ ತನ್ನ ನಿಲುವಿನಿಂದ ಚೂರೂ ಹಿಂದೆ ಸರಿಯಲು ನಿರಾಕರಿಸಿದ್ದಾರೆ.
‘‘ಕತರ್‌ಗೆ ನಾವು ಸಲ್ಲಿಸಿರುವ ಬೇಡಿಕೆಗಳ ಬಗ್ಗೆ ಯಾವುದೇ ಸಂಧಾನ ಸಾಧ್ಯವಿಲ್ಲ. ಕತರ್ ಈಗ ಭಯೋತ್ಪಾದನೆ ಮತ್ತು ಉಗ್ರವಾದಕ್ಕೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕಾಗಿದೆ’’ ಎಂದು ಜುಬೇರ್ ಟ್ವಿಟರ್‌ನಲ್ಲಿ ಹೇಳಿದ್ದಾರೆ.
ಸೌದಿ ಅರೇಬಿಯ, ಯುನೈಟೆಡ್ ಅರಬ್ ಎಮಿರೇಟ್ಸ್, ಈಜಿಪ್ಟ್ ಮತ್ತು ಬಹರೈನ್ ಜೂನ್ 5ರಂದು ಕತರ್‌ನೊಂದಿಗಿನ ಎಲ್ಲ ಸಂಬಂಧ ಮತ್ತು ಸಂಪರ್ಕಗಳನ್ನು ಕೊನೆಗೊಳಿಸಿದ್ದವು.







