‘ಪತ್ರಿಕಾ ಸ್ವಾತಂತ್ರವನ್ನು ಗೌರವಿಸಿ’ : ಫೇಸ್‌ಬುಕ್ ಸಿಇಒಗೆ ಸಹಿ ಮನವಿಯ ಅಭಿಯಾನ
‘ವಾರ್ತಾ ಭಾರತಿ’ ಫೇಸ್‌ಬುಕ್‌ಗೆ ಹೀಗೊಂದು ಬೆಂಬಲ

ವಸ್ತುನಿಷ್ಠ ವರದಿ, ಅಂತಾರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಹಾಗೂ ಸ್ಥಳೀಯ ಸುದ್ದಿಗಳ ಕ್ಷಿಪ್ರ ಅಪ್‌ಡೇಟ್ ಮೂಲಕ ಲಕ್ಷಾಂತರ ಓದುಗ ಅಭಿಮಾನ ಬಳಗವನ್ನು ಸೃಷ್ಟಿಸಿರುವ ‘ವಾರ್ತಾ ಭಾರತಿ’ ಫೇಸ್‌ಬುಕ್ ಖಾತೆಯನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದ ಮೂಲಕವೇ ಅಭಿಯಾನವೊಂದು ಆರಂಭಗೊಂಡಿದೆ. ‘ವಾರ್ತಾ ಭಾರತಿ’ ಪೇಸ್‌ಬುಕ್ ಖಾತೆ ವಿರುದ್ಧ ಫೇಸ್‌ಬುಕ್‌ನಲ್ಲಿ ದ್ವೇಷ ಅಭಿಯಾನದ ಹಿನ್ನೆಲೆಯಲ್ಲಿ ತಾತ್ಕಾಲಿಕ ಅಮಾನತಿಗೆ ಪ್ರತಿಯಾಗಿ ಇದೀಗ change.org ಮೂಲಕ ಬೆಂಬಲಿಸುವ ಅಭಿಯಾನಕ್ಕೆ ಖ್ಯಾತ ಉದ್ಯಮಿ, ಲೇಖಕ, ಕವಿಯೂ ಆಗಿರುವ ರಹೀಂ ಟೀಕೆಯವರು ಚಾಲನೆ ನೀಡಿದ್ದಾರೆ. ಫೇಸ್‌ಬುಕ್‌ನ ಸಂಸ್ಥಾಪಕ ಹಾಗೂ ಸಿಇಒ ಮಾರ್ಕ್ ಝುಕರ್‌ಬರ್ಗ್ ಅವರಿಗೆ ಈ ಸಹಿ ಮನವಿಯನ್ನು ರವಾನಿಸಲು ಈ ಅಭಿಯಾನ ನಡೆಯುತ್ತಿದೆ. ‘ಪತ್ರಿಕಾ ಸ್ವಾತಂತ್ರವನ್ನು ಗೌರವಿಸಿ’ ಎಂಬ ಶೀರ್ಷಿಕೆ ಹೊಂದಿರುವ ಈ ಮನವಿ ಅಭಿಯಾನಕ್ಕೆ ‘ಮುಕ್ತ ಮಾಧ್ಯಮಕ್ಕಾಗಿ ನಾವು’ ಎಂಬ ಉಪ ಶೀರ್ಷಿಕೆ ನೀಡಲಾಗಿದೆ.

ಮನವಿಯ ಮುಖ್ಯಾಂಶಗಳು ಹೀಗಿವೆ:
‘‘ಮೌಲ್ಯಗಳ ನೈಜ ಉಲ್ಲಂಘನೆ ಮತ್ತು ಕೆಟ್ಟ ಪ್ರಚಾರ ಅಭಿಯಾನಕಾರರಿಂದ ಉಲ್ಲಂಘನೆ ಬಗ್ಗೆ ಮಾಡಲಾದ ಸುಳ್ಳು ಆಪಾದನೆಗಳ ನಡುವಿನ ವ್ಯತ್ಯಾಸವನ್ನು ಅರಿತುಕೊಳ್ಳಿ. ಸುಳ್ಳು ಸುದ್ದಿಗಳನ್ನು ಹರಡುವ ಫೇಸ್‌ಬುಕ್ ಖಾತೆಗಳಿಗೆ ನಿಯಂತ್ರಣ ಹೇರುವ ಬದಲು ಫೇಸ್‌ಬುಕ್, ಖ್ಯಾತ ‘ವಾರ್ತಾಭಾರತಿ’ ಸುದ್ದಿ ಪುಟ (https://www.facebook.com/varthabharati/) ದಲ್ಲಿ ಸುದ್ದಿಗಳ ಲಿಂಕ್ ಹಾಕುವುದನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡಿದೆ.
ಪಕ್ಷಪಾತವಿಲ್ಲದ ಹಾಗೂ ಜಾತ್ಯತೀತ ಮೌಲ್ಯಗಳೊಂದಿಗೆ ಸುದ್ದಿಗಳನ್ನು ನೀಡುವ ಮೂಲಕ ‘ವಾರ್ತಾಭಾರತಿ’ ಪತ್ರಿಕೆ ಜನಪ್ರಿಯಗೊಂಡಿದೆ. ಒಂದು ವೇಳೆ ವಾರ್ತಾಭಾರತಿ ಫೇಸ್‌ಬುಕ್ ಪುಟದ ನಿಯಮಗಳನ್ನು ಉಲ್ಲಂಘಿಸಿದೆ ಎಂದಾದಲ್ಲಿ, ವಾರ್ತಾಭಾರತಿಯಲ್ಲಿ ಅಂತಹ ಫೇಸ್‌ಬುಕ್ ನಿಯಮಗಳನ್ನು ಉಲ್ಲಂಘಿಸಿದ ಸುದ್ದಿಗಳು ಪ್ರಕಟವಾಗಿರುವ ಬಗ್ಗೆ ವಿವರಗಳನ್ನು ನೀಡಿ.
ಮಾರ್ಕ್ ಝುಕರ್‌ಬರ್ಗ್‌ರವರೇ, ಇದು ಸರಿಯಲ್ಲ, ‘ವಾರ್ತಾಭಾರತಿ’ಯನ್ನು ಗುರಿಯಾಗಿಸಬೇಡಿ. ನಾವು ‘ವಾರ್ತಾ ಭಾರತಿ’ ಜತೆಗಿದ್ದೇವೆ. ಫೇಸ್‌ಬುಕ್‌ನಲ್ಲಿ ನಾವು ವಾರ್ತಾಭಾರತಿಯನ್ನು ಬಯಸುತ್ತೇವೆ. ನನ್ನ ದೇಶವಾಸಿಗಳೇ, ನಾನು ಮುಕ್ತ ಮಾಧ್ಯಮದ ಬೆಂಬಲಿಗ. ಮುಕ್ತ ಮಾಧ್ಯಮಕ್ಕಾಗಿ ನಾವು. ನೀವು ಕೂಡಾ ಮುಕ್ತ ಮಾಧ್ಯಮವನ್ನು ಬಯಸುವುದಾದಲ್ಲಿ ನನ್ನ ಮನವಿಗೆ ಸಹಿ ಹಾಕಿ. ಸತ್ಯದೊಂದಿಗೆ ಐಕ್ಯತೆಯನ್ನು ಪ್ರದರ್ಶಿಸಿ. ಸತ್ಯಮೇವ ಜಯತೇ. ಸತ್ಯಕ್ಕೇ ಗೆಲುವು ಎಂಬುದನ್ನು ನಾನು ನಂಬುತ್ತೇನೆ. ಜೈ ಹಿಂದ್.’’
ಈ ಅಭಿಯಾನವನ್ನು ಬೆಂಬಲಿಸಿ ಸಹಿ ಮಾಡಲು ಈ ಲಿಂಕ್‌ಗೆ ಕ್ಲಿಕ್ ಮಾಡಿ
https://www.change.org/p/mark-zuckerberg-respect-the-freedom-of-press







