ಅಜ್ಜನನ್ನು ಕೊಂದ ಮೊಮ್ಮಗನಿಗೆ ಜಿವಾವಧಿ ಶಿಕ್ಷೆ
ಉಡುಪಿ, ಜೂ.28: ಕಾರ್ಕಳ ತಾಲೂಕಿನ ರೆಂಜಾಳ ಗ್ರಾಮದ ದಾಸಬೆಟ್ಟು ಎಂಬಲ್ಲಿ ಐದು ವರ್ಷಗಳ ಹಿಂದೆ ಅಜ್ಜನನ್ನು ಕೊಲೆಗೈದ ಮೊಮ್ಮಗನಿಗೆ ಜೀವಾ ವಧಿ ಶಿಕ್ಷೆ ವಿಧಿಸಿ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಇಂದು ಆದೇಶ ನೀಡಿದೆ.
ದಾಸಬೆಟ್ಟುವಿನ ರವಿ ಯಾನೆ ರವಿವರ್ಮ ಜೈನ್ ಶಿಕ್ಷೆಗೆ ಗುರಿಯಾದ ಅಪರಾಧಿ ಎಂದು ಗುರಿತಿಸಲಾಗಿದೆ. ಈತ ಕೆಲಸ ಮಾಡದೆ ತಿರುಗಾಡುತ್ತ ಮನೆಯವರಲ್ಲಿ ಖರ್ಚಿಗೆ ಹಣ ಕೇಳುತ್ತಿದ್ದನು. 2013ರ ಡಿ. 21ರಂದು ಬೆಳಗ್ಗೆ ಸುಮಾರು 8.30ಕ್ಕೆ ರವಿ ವರ್ಮನ ಅಜ್ಜ ನೇಮಿರಾಜ ಪೂವಣಿ ಎಂಬವರು ಮನೆಯ ಅಂಗಳದಲ್ಲಿ ನಿಂತಿದ್ದಾಗ ಅಲ್ಲಿಗೆ ಬಂದ ರವಿವರ್ಮ, ನೇಮಿರಾಜ ಪೂವಣಿ ಅವರಲ್ಲಿ ಖರ್ಚಿಗೆ ಹಣ ನೀಡುವಂತೆ ಕೇಳಿದನು. ಅದಕ್ಕೆ ನೇಮಿರಾಜ ಪೂವಣಿ ‘ಯಾಕೆ ನೀನು ಈ ರೀತಿ ತಿರುಗುತ್ತಿ ಎಲ್ಲಿಯಾದರೂ ಏನಾದರೂ ಕೆಲಸ ಮಾಡಲಿಕ್ಕೆ ಆಗುವು ದಿಲ್ಲವಾ’ ಎಂದು ಹೇಳಿದರು.
ಇದರಿಂದ ಕೋಪಗೊಂಡ ರವಿವರ್ಮ, ನೇಮಿರಾಜ ಪೂವಣಿ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಅಲ್ಲಿಯೇ ಅಂಗಳದಲ್ಲಿ ಇದ್ದ ಮರದ ರೀಪನ್ನು ತೆಗೆದು ನೇಮಿರಾಜ ಪೂವಣಿಯ ತಲೆಗೆ ಹೊಡೆದನು. ಇದರಿಂದ ನೇಮಿರಾಜ ಪೂವಣಿ ಬಿದ್ದಿದ್ದು, ಬಳಿಕ ಆತ ಅಲ್ಲೇ ಇದ್ದ ದೊಣ್ಣೆಯಿಂದ ಬಿದ್ದಿದ್ದ ನೇಮಿರಾಜ ಪೂವಣಿಯ ತಲೆಗೆ ಹೊಡೆದು ತೀವ್ರವಾಗಿ ಗಾಯಗೊಳಿಸಿದ್ದು, ಬಿಡಿಸಲು ಹೋದ ಆತನ ತಂಗಿ ಸುಜಾತಳಿಗೆ ರೀಪಿನಿಂದ ಹಲ್ಲೆ ನಡೆಸಿದ್ದು, ಇದರಿಂದ ಆಕೆ ಗಾಯಗೊಂಡಿದ್ದಳು. ಗಂಭೀರವಾಗಿ ಗಾಯಗೊಂಡ ನೇಮಿರಾಜ ಜೈನ್ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.
ಪ್ರಕರಣದ ತನಿಖೆಯನ್ನು ಅಂದಿನ ಕಾರ್ಕಳದ ವೃತ್ತ ನಿರೀಕ್ಷಕ ಜಿ.ಎಂ. ನಾಯ್ಕರ್ ನಡೆಸಿ, ಆರೋಪಿಯ ವಿರುದ್ಧ ಭಾ.ದಂ.ಸಂ. ಕಲಂ 302, 324 ಕಾಯ್ದೆಯಡಿಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣೆಪಟ್ಟಿ ಸಲ್ಲಿಸಿದ್ದರು. ಉಡುಪಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಸಾಕ್ಷಿಗಳನ್ನು ವಿಚಾರಣೆ ನಡೆಸಿ ಹಾಗೂ ವಾದ ವಿವಾದವನ್ನು ಆಲಿಸಿತು.
ಆರೋಪಿಯು ಆತನ ಮೇಲೆ ಆಪಾದಿಸಿದಂತೆ ಅಪರಾಧವೆಸಗಿರುವುದು ಸಾಬೀತಾಗಿದೆಯೆಂದು ಪರಿಗಣಿಸಿ ನ್ಯಾಯಾಧೀಶ ಟಿ.ವೆಂಕಟೇಶ ನಾಯ್ಕ ರವಿ ವರ್ಮ ಜೈನ್‌ಗೆ ಭಾ.ದಂ.ಸಂ. ಕಲಂ 302ಕ್ಕೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದರು. ಪ್ರಾಸಿಕ್ಯುಷನ್ ಪರವಾಗಿ ಉಡುಪಿ ಪಬ್ಲಿಕ್ ಪ್ರಾಸಿಕ್ಯೂಟರ್ ಶಾಂತಿಬಾಯಿ ಸಾಕ್ಷಿ ವಿಚಾರಣೆ ಮತ್ತು ವಾದವನ್ನು ಮಂಡಿಸಿದ್ದರು.







