ಪೊಕ್ಸೊ ಪ್ರಕರಣದ ಆರೋಪಿಯಿಂದ ಸಾಕ್ಷಿಗೆ ಹಲ್ಲೆ

ಅಮಾಸೆಬೈಲು, ಜೂ. 28: ಶೇಡಿಮನೆ ಬಾಲಕಿ ಆತ್ಮಹತ್ಯೆ ಯತ್ನ ಪ್ರಕರಣದ ಆರೋಪಿ ಪ್ರಶಾಂತ್ ಹೆಗ್ಡೆ ಪ್ರಕರಣದ ಸಾಕ್ಷಿ ಅಗಳಿಬೈಲುವಿನ ಸತೀಶ್ ಹೆಗ್ಡೆ (40) ಎಂಬವರಿಗೆ ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂ. 27ರಂದು ಸಂಜೆ 7ಗಂಟೆಯ ಸುಮಾರಿಗೆ ಸತೀಶ್ ಹೆಗ್ಡೆ ತನ್ನ ಸ್ನೇಹಿತನ ಬೈಕಿನಲ್ಲಿ ಹೋಗುತ್ತಿರುವಾಗ ಪ್ರಕರಣದ ಆರೋಪಿ ಪ್ರಶಾಂತ ಹೆಗ್ಡೆ ಹಾಗೂ ಆತನ ಅಳಿಯ ತಡೆದು ನಿಲ್ಲಿಸಿ ಅವಾಚ್ಯ ಶಬ್ಧಗಳಿಂದ ಬೈದು ‘ನೀನು ಹುಡುಗಿ ಕೇಸಿನಲ್ಲಿ ನನ್ನನ್ನು ಸಿಕ್ಕಿಸಿ ಹಾಕಿಸಿದ್ದಿಯಾ ನೀನು ಈ ಬಗ್ಗೆ ಕೋರ್ಟಿನಲ್ಲಿ ಸಾಕ್ಷಿ ಹೇಳಿದರೆ ಜಾಗ್ರತೆ. ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಕೊಚ್ಚಿ ಹಾಕುತ್ತೇನೆ’ ಎಂದು ಬೆದರಿಸಿ ಕೈಯಿಂದ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರಶಾಂತ್ ಹೆಗ್ಡೆ ವಿರುದ್ಧ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೊಕ್ಸೊ ಕಾಯಿದೆಯಡಿ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಲೆಮರೆಸಿಕೊಂಡಿದ್ದ ಪ್ರಶಾಂತ್ ಹೆಗ್ಡೆ ಇತ್ತೀಚೆಗೆಷ್ಟೆ ಉಡುಪಿ ಜಿಲ್ಲಾ ಸತ್ರ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದ.





