ಮಹಿಳೆಯರ ವಿಶ್ವಕಪ್: ನಾಳೆ ಭಾರತದ ಮಹಿಳಾ ತಂಡಕ್ಕೆ ವಿಂಡೀಸ್ ಸವಾಲು

ಟೌಂಟನ್, ಜೂ.28: ಇಂಗ್ಲೆಂಡ್ ವಿರುದ್ಧ ವಿಶ್ವಕಪ್ ಕ್ರಿಕೆಟ್‌ನ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿದ್ದ ಭಾರತದ ಮಹಿಳೆಯರ ತಂಡ ಗುರುವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ವೆಸ್ಟ್‌ಇಂಡೀಸ್‌ನ್ನು ಎದುರಿಸಲಿದೆ.
ಭಾರತ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 35 ರನ್‌ಗಳ ಗೆಲುವಿನೊಂದಿಗೆ ಶುಭಾರಂಭ ಮಾಡಿತ್ತು. ಇದೇ ವೇಳೆ ವೆಸ್ಟ್‌ಇಂಡಿಸ್ ತನ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ 8 ವಿಕೆಟ್‌ಗಳ ಅಂತರದಲ್ಲಿ ಸೋಲು ಅನುಭವಿಸಿತ್ತು.
ಭಾರತ ಕಳೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಬೌಲಿಂಗ್, ಫೀಲ್ಡಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಗೆಲುವು ದಾಖಲಿಸಿತ್ತು.
ಮೊದಲು ಬ್ಯಾಟ್ ಮಾಡಿದ ಭಾರತ 3 ವಿಕೆಟ್ ನಷ್ಟದಲ್ಲಿ 281 ರನ್ ಗಳಿಸಿತ್ತು. ಗೆಲುವಿಗೆ 282 ರನ್‌ಗಳ ಸವಾಲು ಪಡೆದ ಇಂಗ್ಲೆಂಡ್ 47.3 ಓವರ್‌ಗಳಲ್ಲಿ 246 ರನ್‌ಗಳಿಗೆ ಆಲೌಟಾಗಿತ್ತು. ಇಂಗ್ಲೆಂಡ್‌ನ ನಾಲ್ವರು ಆಟಗಾರ್ತಿಯರು ರನೌಟಾಗಿದ್ದರು. ಹೀಗಾಗಿ ಭಾರತದ ಚುರುಕಿನ ಕ್ಷೇತ್ರ ರಕ್ಷಣೆಯ ಮುಂದೆ ಆಂಗ್ಲರ ಆಟ ನಡೆಯಲಿಲ್ಲ.
ಭಾರತದ ಆರಂಭಿಕ ಆಟಗಾರ್ತಿ ಸ್ಮತಿ ಮಂಧಾನ(90), ಮಿಥಾಲಿ ರಾಜ್(71), ಪೂನಮ್ ರಾವತ್(86) ,ಹರ್ಮನ್‌ಪ್ರೀತ್ ಕೌರ್(ಔಟಾಗದೆ 24) ಇವರ ನೆರವಿನಲ್ಲಿ ಭಾರತ ಉತ್ತಮ ಮೊತ್ತ ದಾಖಲಿಸಿತ್ತು.
ಬೌಲಿಂಗ್ ವಿಭಾಗದಲ್ಲೂ ಭಾರತದ ಆಟಗಾರ್ತಿಯರು ಮಿಂಚಿದ್ದರು. ಆಫ್ ಬ್ರೇಕ್ ಬೌಲರ್ ದೀಪ್ತಿ ಶರ್ಮ (47ಕ್ಕೆ 3), ಮಧ್ಯಮ ವೇಗಿ ಶಿಖಾ ಪಾಂಡ್ಯ(35ಕ್ಕೆ 2) , ಲೆಗ್ ಸ್ಪಿನ್ನರ್ ಪೂನಮ್ ಯಾದವ್(51ಕ್ಕೆ1) ಇಂಗ್ಲೆಂಡ್‌ನ ಆಟಗಾರ್ತಿಯರ ಬ್ಯಾಟಿಂಗ್‌ನ್ನು ಬೇಗನೆ ನಿಯಂತ್ರಿಸಿದ್ದರು. ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿರುವ ವಿಂಡೀಸ್‌ನ ಮಹಿಳಾ ತಂಡ ಮೊದಲ ಗೆಲುವಿನ ಕಡೆಗೆ ನೋಡುತ್ತಿದೆ.
ಭಾರತದ ನಾಯಕಿ ಮಿಥಾಲಿ ರಾಜ್ ಭಾರತ ಸೆಮಿಫೈನಲ್‌ನ ಗುರಿ ಹಾಕಿಕೊಂಡಿದೆ ಎಂದು ಹೇಳಿದ್ದಾರೆ. ಸತತ ಏಳು ಅರ್ಧಶತಕಗಳ ಮೂಲಕ ದಾಖಲೆ ನಿರ್ಮಿಸಿರುವ ಮಿಥಾಲಿ ರಾಜ್ ಇದೇ ಪ್ರದರ್ಶನ ಮುಂದುವರಿಸಿದ್ದಾರೆ.
ಮಂಧಾನ ಗಾಯದಿಂದ ಚೇತರಿಕೊಂಡು ತಂಡಕ್ಕೆ ವಾಪಸಾಗುತ್ತಿದ್ದಂತೆ ತನ್ನ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಅವರು ಕಳೆದ ಪಂದ್ಯದಲ್ಲಿ 72 ಎಸೆತಗಳಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಲ್ಲಿ 90 ರನ್ ದಾಖಲಿಸಿದ್ದರು.ಆದರೆ ಇಂಗ್ಲೆಂಡ್ ವಿರುದ್ದ ಅವರಿಗೆ ವಿಕೆಟ್ ದೊರೆಯಲಿಲ್ಲ. ಜೂಲಿಯನ್ ಗೋಸ್ವಾಮಿ ಭಾರತದ ಏಕದಿನ ಚರಿತ್ರೆಯಲ್ಲಿ ಗರಿಷ್ಠ ವಿಕೆಟ್ ಪಡೆದಿರುವ ಬೌಲರ್. ಅವರು ಭಾರತದ ಬೌಲಿಂಗ್ ವಿಭಾಗವನ್ನು ಮುನ್ನಡೆಸುತ್ತಿದ್ದಾರೆ.
ಭಾರತ ಕಳೆದ ನಾಲ್ಕು ಏಕದಿನ ಸರಣಿಗಳಲ್ಲಿ ಜಯ ಗಳಿಸಿದೆ.ಶ್ರೀಲಂಕಾ ವಿರುದ್ಧ ಕ್ಲೀನ್ ಸ್ವೀಪ್.ತವರಿನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಗೆಲುವು, ವರ್ಲ್ಡ್ ಕಪ್ ಅರ್ಹತಾ ಸುತ್ತಿನ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಜಯ, ನಾಲ್ಕು ದೇಶಗಳ ಟೂರ್ನಿಯಲ್ಲಿ ಭಾರತ ಗೆಲುವು ದಾಖಲಿಸಿದೆ.
ಭಾರತ ಮುಂದಿನ ಪಂದ್ಯದಲ್ಲಿ ವೆಸ್ಟ್‌ಇಂಡೀಸ್ ವಿರುದ್ದ ಗೆಲ್ಲುವ ವಿಶ್ವಾಸದಲ್ಲಿದೆ.
ಇದೇ ವೇಳೆ ಹಾಲಿ ಚಾಂಪಿಯನ್ ಆಸ್ಟ್ರೇಲಿಯ ತಂಡ ಶ್ರೀಲಂಕಾವನ್ನು ಎದುರಿಸಲಿದೆ.
ಆಸ್ಟ್ರೇಲಿಯವು ವೆಸ್ಟ್ ಇಂಡೀಸ್ ವಿರುದ್ಧ 8 ವಿಕೆಟ್‌ಗಳ ಜಯ ಗಳಿಸಿತ್ತು. ಶ್ರೀಲಂಕಾ ತಂಡ ನ್ಯೂಝಿಲೆಂಡ್ ವಿರುದ್ಧ 9 ವಿಕೆಟ್‌ಗಳ ಸೋಲು ಅನುಭವಿಸಿತ್ತು.
ಭಾರತ: ಮಿಥಾಲಿ ರಾಜ್(ನಾಯಕಿ), ಹರ್ಮನ್‌ಪ್ರೀತ್ ಕೌರ್, ಸ್ಮತಿ ಮಂಧಾನ, ವೇದಾ ಕೃಷ್ಣ ಮೂರ್ತಿ, ಮೋನಾ ಮೆಶ್ರಾಮ್, ಪೂನಮ್ ರಾವತ್, ದೀಪ್ತಿ ಶರ್ಮ, ಜೂಲಾನ್ ಗೋಸ್ವಾಮಿ, ಶಿಖಾ ಪಾಂಡೆ, ಎಕ್ತಾ ಬಿಶ್ತ್, ಸುಶ್ಮಾ ವರ್ಮ, ಮಂಶಿ ಜೋಶಿ, ರಾಜೇಶ್ವರಿ ಗಾಯಕ್‌ವಾಡ್, ಪೂನಮ್ ಯಾದವ್, ನುಝಾತ್ ಪರ್ವಿನ್.
ವೆಸ್ಟ್‌ಇಂಡೀಸ್: ಸ್ಟಫಾನಿ ಟೇಲರ್, ಮೆರ್ಸಿಯಾ ಅಗ್ಯುಲೆರಿಯಾ, ರೆನ್ಸೀ ಬೊಯ್ಸ್,ಶಮಿಲಿಯಾ ಕಾನ್ನೆಲ್,ಆನೆಲ್ ಡಾಲೈ, ದಿಯೆಂದ್ರ ದೊತ್ತಿನ್, ಅಫೈ ಫ್ಲೆಚೆರ್,ಕ್ಯುನಾ ಜೋಸೆಫ್, ಕೈಶೊನಾ ನೈಟ್, ಹಲೈ ಮ್ಯಾಥ್ಯೂಸ್, ಅನಿನಾ ಮೊಹಮ್ಮದ್, ಚೆಡಿಯನ್ ನೇಶನ್, ಅಕೇರಾ ಪೀಟರ್ಸ್, ಶಾಕಿರಾ ಸಲ್ಮಾನ್, ಫೆಲ್ಸಿಯಾ ವಾಲ್ಟರ್ಸ್.
ಪಂದ್ಯದ ಸಮಯ: ಅಪರಾಹ್ನ 3:00







